ಮುಂಬೈ, ಮಾ. 30 (DaijiworldNews/TA): ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾಗೂ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರ ಕಾರುಗಳ ಮೇಲಿನ ಪ್ರೀತಿ ಮತ್ತೊಮ್ಮೆ ಬೆಳಕಿಗೆ ಬಂದಿದೆ. ಈಗಾಗಲೇ ದುಬಾರಿ ಕಾರುಗಳ ಸಂಗ್ರಹ ಹೊಂದಿರುವ ಪಾಂಡ್ಯ, ಇತ್ತೀಚೆಗೆ ಮತ್ತೊಂದು ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ವಿಶೇಷವೆಂದರೆ, ಕೇವಲ ಆರು ತಿಂಗಳಲ್ಲಿ ಇದು ಅವರ ನಾಲ್ಕನೇ ಕಾರು ಖರೀದಿ ಆಗಿದೆ.

ಈ ಬಾರಿ ಪಾಂಡ್ಯ ಹೊಸ ಜನರೇಷನ್ನ ಮರ್ಸಿಡಿಸ್-ಬೆನ್ಜ್ ವಿ-ಕ್ಲಾಸ್ ಕಾರನ್ನು ಖರೀದಿಸಿದ್ದಾರೆ. ಈ ಕಾರು ಖರೀದಿಸಿದ ಭಾರತದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಕೂಡ ಅವರು ಪಾತ್ರರಾಗಿದ್ದಾರೆ ಎನ್ನಲಾಗುತ್ತಿದೆ. ಸುಮಾರು ರೂ. 1.4 ಕೋಟಿ ಮೌಲ್ಯದ ಈ ಐಷಾರಾಮಿ ಎಂಪಿವಿ ವಿಶಾಲ ಒಳಾಂಗಣ, ಪ್ರೀಮಿಯಂ ಫೀಚರ್ಗಳು ಮತ್ತು ಆರಾಮದಾಯಕ ಪ್ರಯಾಣಕ್ಕೆ ಹೆಸರುವಾಸಿಯಾಗಿದೆ. ಹಾರ್ದಿಕ್ ತಮ್ಮ ಗೆಳತಿ ಮಹಿಕಾ ಅವರೊಂದಿಗೆ ಹೊಸ ಕಾರಿನ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಹಾರ್ದಿಕ್ ಪಾಂಡ್ಯ ಅವರ ಕಾರು ಸಂಗ್ರಹ ಈಗಾಗಲೇ ಗಮನ ಸೆಳೆಯುತ್ತಿದೆ. ಇತ್ತೀಚೆಗೆ ಅವರು ಸುಮಾರು ರೂ. 4 ಕೋಟಿ ಮೌಲ್ಯದ ಲ್ಯಾಂಡ್ ರೋವರ್ ಡಿಫೆಂಡರ್ ಕಾರನ್ನು ಖರೀದಿಸಿ ತಮ್ಮ ಮಗನಿಗೆ ಉಡುಗೊರೆಯಾಗಿ ನೀಡಿದ್ದರು. ಅದರ ಬಳಿಕ ಸುಮಾರು ರೂ. 12 ಕೋಟಿ ಮೌಲ್ಯದ ಫೆರಾರಿ 12 ಸಿಲಿಂಡ್ರಿ ಕಾರು ಕೂಡ ಖರೀದಿಸಿದ್ದಾರೆ. ಇದಲ್ಲದೆ ರೂ. 4.5 ಕೋಟಿ ಮೌಲ್ಯದ ಲಂಬೋರ್ಗಿನಿ ಉರುಸ್ ಕೂಡ ಅವರಲ್ಲಿದೆ.
ಇನ್ನು ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿರುವ ಹಾರ್ದಿಕ್ ಪಾಂಡ್ಯ, ಈ ಬಾರಿ ಐಪಿಎಲ್ನಲ್ಲಿ ಗೆಲುವಿನ ಶುಭಾರಂಭ ಮಾಡಿದ್ದಾರೆ. ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆಡಿದ ಮುಂಬೈ, 221 ರನ್ಗಳ ಭಾರಿ ಗುರಿಯನ್ನು ಕೊನೆಯ ಓವರ್ನಲ್ಲಿ ಬೆನ್ನಟ್ಟಿತು. ಈ ಮೂಲಕ 2013 ನಂತರ ಮೊದಲ ಪಂದ್ಯದಲ್ಲೇ ಗೆಲುವು ಸಾಧಿಸಿದ ಸಾಧನೆಗೂ ತಂಡ ಪಾತ್ರವಾಯಿತು. ಜೊತೆಗೆ 221 ರನ್ಗಳ ಗುರಿ ಬೆನ್ನಟ್ಟಿದ ದಾಖಲೆಯೂ ಮುಂಬೈ ಪಾಲಾಗಿದೆ.