ಮುಂಬೈ, ಜ. 14 (DaijiworldNews/AA): ಕಳೆದ ಐದು ಇನ್ನಿಂಗ್ಸ್ಗಳಲ್ಲಿಯೂ 50 ಪ್ಲಸ್ ಇನ್ನಿಂಗ್ಸ್ ಆಡಿರುವ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ 4 ವರ್ಷ 9 ತಿಂಗಳ ನಂತರ ಮತ್ತೊಮ್ಮೆ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ನಂ.1 ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ.

ಐಸಿಸಿ ಬುಧವಾರ ಬಿಡುಗಡೆ ಮಾಡಿರುವ ಇತ್ತೀಚಿನ ಏಕದಿನ ಶ್ರೇಯಾಂಕದಲ್ಲಿ ಅತ್ಯುತ್ತಮ ಫಾರ್ಮ್ನಲ್ಲಿರುವ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ 1736 ದಿನಗಳ ನಂತರ ಮತ್ತೊಮ್ಮೆ ಏಕದಿನ ಕ್ರಿಕೆಟ್ನಲ್ಲಿ ನಂಬರ್ ಒನ್ ಬ್ಯಾಟ್ಸ್ಮನ್ ಆಗಿದ್ದಾರೆ.
ವಿರಾಟ್ ಕೊಹ್ಲಿ ಏಪ್ರಿಲ್ 13, 2021 ರವರೆಗೆ ಏಕದಿನ ಶ್ರೇಯಾಂಕದಲ್ಲಿ ನಂಬರ್ ಒನ್ ಸ್ಥಾನವನ್ನು ಅಲಂಕರಿಸಿದ್ದರು. ಆದರೆ ಏಪ್ರಿಲ್ 14 ರಂದು ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಆಝಂ ನಂಬರ್ ಸ್ಥಾನಕ್ಕೇರಿದ ಹಿನ್ನೆಲೆ ಕೊಹ್ಲಿ ಆ ಸ್ಥಾನದಿಂದ ಕೆಳಗಿಳಿದಿದ್ದರು.
ಆದರೀಗ ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಎರಡು ಶತಕ ಮತ್ತು ಅರ್ಧಶತಕ ಬಾರಿಸಿದ್ದ ವಿರಾಟ್, ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನದಲ್ಲಿ 93 ರನ್ ಬಾರಿಸಿದ್ದರು. ಅವರ ಈ ಉತ್ತಮ ಪ್ರದರ್ಶನದಿಂದ ಇದೀಗ ಮತ್ತೊಮ್ಮೆ ಅಗ್ರಸ್ಥಾನಕ್ಕೇರಿದ್ದಾರೆ.
ನೂತನವಾಗಿ ಬಿಡುಗಡೆಯಾದ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ವಿರಾಟ್ ಕೊಹ್ಲಿ 785 ರೇಟಿಂಗ್ ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್ ಬ್ಯಾಟ್ಸ್ಮನ್ ಡ್ಯಾರಿಲ್ ಮಿಚೆಲ್ 784 ರೇಟಿಂಗ್ ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಬಳಿಕ ಕ್ರಮವಾಗಿ ರೋಹಿತ್ ಶರ್ಮಾ 775, ಇಬ್ರಾಹಿಂ ಜದ್ರಾನ್ 764, ಶುಭಮನ್ ಗಿಲ್ 725 ರೇಟಿಂಗ್ ಅಂಕಗಳೊಂದಿಗೆ ಮೂರನೇ, ನಾಲ್ಕನೇ ಹಾಗೂ ಐದನೇ ಸ್ಥಾನಗಳಲ್ಲಿದ್ದಾರೆ.