ಹೈದರಾಬಾದ್, ಜ. 13 (DaijiworldNews/ AK):ವಾಕ್ಸೆನ್ ವಿಶ್ವವಿದ್ಯಾಲಯ, ಹೈದರಾಬಾದ್ ಆಶ್ರಯದಲ್ಲಿ ಆಯೋಜಿಸಲಾದ AIU ದಕ್ಷಿಣ–ಪೂರ್ವ ವಲಯ ಅಂತರ್ ವಿಶ್ವವಿದ್ಯಾಲಯ ಫುಟ್ಬಾಲ್ ಚಾಂಪಿಯನ್ಶಿಪ್ 2025–26ರಲ್ಲಿ ಮಂಗಳೂರು ಯೆನೆಪೋಯಾ ವಿಶ್ವವಿದ್ಯಾಲಯವು ಚಾಂಪಿಯನ್ಗಳಾಗಿ ಹೊರಹೊಮ್ಮಿದೆ.

ಈ ಗೆಲುವಿನೊಂದಿಗೆ ಯೆನೆಪೋಯಾ ವಿಶ್ವವಿದ್ಯಾಲಯವು ಜನವರಿ 30ರಿಂದ ಫೆಬ್ರವರಿ 8, 2026ರವರೆಗೆ ಕೊಲ್ಕತ್ತಾ, ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಫುಟ್ಬಾಲ್ ಚಾಂಪಿಯನ್ಶಿಪ್ಗೆ ಅರ್ಹತೆ ಪಡೆದಿದೆ.
2022–23ರಿಂದ AIU ಫುಟ್ಬಾಲ್ ಸ್ಪರ್ಧೆಯನ್ನು ನಾಲ್ಕು ವಲಯಗಳಿಂದ ಎಂಟು ವಲಯಗಳಾಗಿ ವಿಸ್ತರಿಸಿದ ನಂತರ, ಯೆನೆಪೋಯಾ ವಿಶ್ವವಿದ್ಯಾಲಯವು ನಿರಂತರವಾಗಿ ವಲಯ ಚಾಂಪಿಯನ್ಗಳಾಗಿ ಅಖಿಲ ಭಾರತ ಮಟ್ಟಕ್ಕೆ ಅರ್ಹತೆ ಪಡೆಯುತ್ತಿದೆ, ಇದು ವಿಶ್ವವಿದ್ಯಾಲಯದ ಕ್ರೀಡಾ ಶ್ರೇಷ್ಠತೆಯನ್ನು ತೋರಿಸುತ್ತದೆ.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ, ಯೆನೆಪೋಯಾ ವಿಶ್ವವಿದ್ಯಾಲಯವು ಸೇಂಟ್ ಜೋಸೆಫ್ ವಿಶ್ವವಿದ್ಯಾಲಯ, ಬೆಂಗಳೂರು (ಕರ್ನಾಟಕ) ತಂಡವನ್ನು 3–0 ಗೋಲುಗಳಿಂದ ಮಣಿಸಿ ಲೀಗ್ ಹಂತಕ್ಕೆ ಪ್ರವೇಶಿಸಿತು.
ಲೀಗ್ ಪಂದ್ಯಗಳಲ್ಲಿ ಯೆನೆಪೋಯಾ ವಿಶ್ವವಿದ್ಯಾಲಯವು ಭರ್ಜರಿ ಪ್ರದರ್ಶನ ನೀಡಿತು. ಒಸ್ಮಾನಿಯಾ ವಿಶ್ವವಿದ್ಯಾಲಯ, ಹೈದರಾಬಾದ್ (ತೆಲಂಗಾಣ) ವಿರುದ್ಧ 5–1 ಗೋಲುಗಳ ಗೆಲುವು, ಹೇಮಚಂದ್ ಯಾದವ್ ವಿಶ್ವವಿದ್ಯಾಲಯ, ಛತ್ತೀಸ್ಗಢ ವಿರುದ್ಧ 2–0 ಗೆಲುವು, ಪಂ. ರವಿಶಂಕರ್ ಶುಕ್ಲ ವಿಶ್ವವಿದ್ಯಾಲಯ, ಛತ್ತೀಸ್ಗಢ ವಿರುದ್ಧ 12–0 ಭರ್ಜರಿ ಜಯ ಮೂರು ಪಂದ್ಯಗಳಿಂದ 9 ಅಂಕಗಳೊಂದಿಗೆ ಯೆನೆಪೋಯಾ ವಿಶ್ವವಿದ್ಯಾಲಯ ಲೀಗ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿತು.
ಹೇಮಚಂದ್ ಯಾದವ್ ವಿಶ್ವವಿದ್ಯಾಲಯ (ಛತ್ತೀಸ್ಗಢ) 4 ಅಂಕಗಳೊಂದಿಗೆ ಎರಡನೇ ಸ್ಥಾನವನ್ನು ಪಡೆದರೆ, ಅದೇ ಅಂಕಗಳೊಂದಿಗೆ ಒಸ್ಮಾನಿಯಾ ವಿಶ್ವವಿದ್ಯಾಲಯ (ತೆಲಂಗಾಣ) ಮೂರನೇ ಸ್ಥಾನದಲ್ಲಿದೆ. ಪಂ. ರವಿಶಂಕರ್ ಶುಕ್ಲ ವಿಶ್ವವಿದ್ಯಾಲಯ (ಛತ್ತೀಸ್ಗಢ) ನಾಲ್ಕನೇ ಸ್ಥಾನ ಪಡೆದಿದೆ. ಎಲ್ಲ ನಾಲ್ಕು ತಂಡಗಳು ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಫುಟ್ಬಾಲ್ ಚಾಂಪಿಯನ್ಶಿಪ್ಗೆ ಅರ್ಹತೆ ಪಡೆದಿವೆ.
ಯೆನೆಪೋಯಾ ವಿಶ್ವವಿದ್ಯಾಲಯದ ತಂಡವನ್ನು ಮುಖ್ಯ ಕೋಚ್ ಶ್ರೀ ಬಿಬಿ ಥಾಮಸ್, ಫಿಸಿಯೋಥೆರಪಿಸ್ಟ್ ಶ್ರೀ ನಿತಿನ್ ಮಾರ್ಗದರ್ಶನದಲ್ಲಿ ಮುನ್ನಡೆಸಲಾಗಿದ್ದು, ಯೆನೆಪೋಯಾ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ವಿಭಾಗಾಧ್ಯಕ್ಷರಾದ ಶ್ರೀ ಸುಜಿತ್ ಕೆ.ವಿ. ಅವರು ತಂಡದ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದರು.ಏಳು ದಿನಗಳ ಕಾಲ ನಡೆದ ಈ ಚಾಂಪಿಯನ್ಶಿಪ್ 2026ರ ಜನವರಿ 10ರಂದು ಹೈದರಾಬಾದ್ನಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿತು.