ನವದೆಹಲಿ, ಜ. 07 (DaijiworldNews/TA): ಬಾಂಗ್ಲಾದೇಶ್ನ ಪ್ರಮುಖ ಎಡಗೈ ವೇಗಿ ಮುಸ್ತಫಿಝುರ್ ರೆಹಮಾನ್ ಅವರನ್ನು ಕೊಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಫ್ರಾಂಚೈಸಿ ಬರೋಬ್ಬರಿ 9.2 ಕೋಟಿ ರೂಪಾಯಿಗೆ ಖರೀದಿಸಿತ್ತು. ಆದರೆ ಇದೀಗ ಐಪಿಎಲ್ ಆರಂಭಕ್ಕೂ ಮುನ್ನವೇ ಕೆಕೆಆರ್ ತಂಡ ಮುಸ್ತಫಿಝುರ್ ರೆಹಮಾನ್ ಅವರನ್ನು ಬಿಡುಗಡೆ ಮಾಡಿದೆ. ಐಪಿಎಲ್ನಿಂದ ಹೊರಬಿದ್ದ ಬೆನ್ನಲ್ಲೇ ಮುಸ್ತಫಿಝುರ್ ರೆಹಮಾನ್ ಅವರಿಗೆ ಪಾಕಿಸ್ತಾನ್ ಸೂಪರ್ ಲೀಗ್ (ಪಿಎಸ್ಎಲ್)ನಿಂದ ದೊಡ್ಡ ಆಫರ್ ಲಭಿಸಿದೆ.

ಬಾಂಗ್ಲಾದೇಶ್ ರಾಷ್ಟ್ರೀಯ ತಂಡದ ಅನುಭವಿ ವೇಗಿಯಾಗಿರುವ ಮುಸ್ತಫಿಝುರ್ ರೆಹಮಾನ್ ಅವರನ್ನು ಐಪಿಎಲ್ನಿಂದ ಕೈಬಿಡುವಂತೆ ಬಿಸಿಸಿಐ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಗೆ ಸೂಚನೆ ನೀಡಿತ್ತು. ಈ ಸೂಚನೆಯ ಬೆನ್ನಲ್ಲೇ ಕೆಕೆಆರ್ ತಂಡ ಬಾಂಗ್ಲಾದೇಶ್ ಆಟಗಾರನನ್ನು ಬಿಡುಗಡೆ ಮಾಡಿರುವುದಾಗಿ ಅಧಿಕೃತವಾಗಿ ತಿಳಿಸಿದೆ.
ಈ ನಿರ್ಧಾರಕ್ಕೆ ಕಾರಣವಾಗಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹತ್ಯೆ ಹಾಗೂ ದೌರ್ಜನ್ಯ ಪ್ರಕರಣಗಳನ್ನು ಖಂಡಿಸಿ ಭಾರತದಲ್ಲಿ ನಡೆದ ಪ್ರತಿಭಟನೆಗಳು ಪ್ರಮುಖವಾಗಿವೆ ಎನ್ನಲಾಗಿದೆ. ಈ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಕೆಕೆಆರ್ ಪರ ಬಾಂಗ್ಲಾದೇಶ್ ಆಟಗಾರ ಮುಸ್ತಫಿಝುರ್ ರೆಹಮಾನ್ ಅವರನ್ನು ಕಣಕ್ಕಿಳಿಸಲು ಅವಕಾಶ ನೀಡಬಾರದು ಎಂಬ ಕೂಗು ಕೇಳಿಬಂದಿತ್ತು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಬಿಸಿಸಿಐ, ಯಾವುದೇ ವಿವಾದಗಳು ಐಪಿಎಲ್ ಮೇಲೆ ಪರಿಣಾಮ ಬೀರುವುದನ್ನು ತಪ್ಪಿಸುವ ಉದ್ದೇಶದಿಂದ ಮುಸ್ತಫಿಝುರ್ ರೆಹಮಾನ್ ಅವರನ್ನು ತಂಡದಿಂದ ಬಿಡುಗಡೆ ಮಾಡುವಂತೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
ಬಿಸಿಸಿಐ ಸೂಚನೆಯಂತೆ ಕೆಕೆಆರ್ ಫ್ರಾಂಚೈಸಿ ತಕ್ಷಣವೇ ಕ್ರಮ ಕೈಗೊಂಡಿದ್ದು, ಈ ಮೂಲಕ ಬಾಂಗ್ಲಾದೇಶ್ ವೇಗಿ ಐಪಿಎಲ್ನಿಂದ ಹೊರಬಿದ್ದಿದ್ದಾರೆ. ಈ ಬೆಳವಣಿಗೆ ಐಪಿಎಲ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಇದೀಗ ಐಪಿಎಲ್ನಿಂದ ಹೊರಬಿದ್ದ ಬೆನ್ನಲ್ಲೇ ಮುಸ್ತಫಿಝುರ್ ರೆಹಮಾನ್ ಅವರಿಗೆ ಪಾಕಿಸ್ತಾನ್ ಸೂಪರ್ ಲೀಗ್ (ಪಿಎಸ್ಎಲ್)ನಿಂದ ದೊಡ್ಡ ಆಫರ್ ಲಭಿಸಿದೆ. ಪಿಎಸ್ಎಲ್ ಮುಂದಿನ ಸೀಸನ್ಗೆ ಆಟಗಾರರ ಆಯ್ಕೆ ಪ್ರಕ್ರಿಯೆ ಜನವರಿ 8ರಂದು ನಡೆಯಲಿದ್ದು, ಅದಕ್ಕೂ ಮುನ್ನವೇ ಕೆಲ ಫ್ರಾಂಚೈಸಿಗಳು ಮುಸ್ತಫಿಝುರ್ ರೆಹಮಾನ್ ಅವರನ್ನು ಸಂಪರ್ಕಿಸಿ ಲೀಗ್ನಲ್ಲಿ ಭಾಗವಹಿಸಲು ಹೆಸರು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿವೆ ಎಂದು ವರದಿಯಾಗಿದೆ.
ಈ ಹಿನ್ನೆಲೆ ಮುಸ್ತಫಿಝುರ್ ರೆಹಮಾನ್ ಇದೀಗ ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಕಣಕ್ಕಿಳಿಯಲು ಅಧಿಕೃತವಾಗಿ ಹೆಸರು ನೋಂದಾಯಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಪಿಎಸ್ಎಲ್ನಲ್ಲಿ ಅವರನ್ನು ನೋಡಬಹುದಾಗಿದೆ. ಐಪಿಎಲ್ನಿಂದ ಹೊರಬಿದ್ದರೂ, ಅಂತರರಾಷ್ಟ್ರೀಯ ಟಿ20 ಲೀಗ್ಗಳಲ್ಲಿ ಮುಸ್ತಫಿಝುರ್ ರೆಹಮಾನ್ಗೆ ಬೇಡಿಕೆ ಇನ್ನೂ ಕಡಿಮೆಯಾಗಿಲ್ಲ ಎಂಬುದು ಇದರಿಂದ ಸ್ಪಷ್ಟವಾಗಿದೆ.