ನವದೆಹಲಿ, ಜ. 04 (DaijiworldNews/TA): ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆದ ದಾಳಿಗಳನ್ನು ಖಂಡಿಸಿ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಿಂದ ಬಾಂಗ್ಲಾ ಆಟಗಾರರನ್ನು ಕೈಬಿಡಬೇಕು ಎಂಬ ಒತ್ತಾಯದ ನಡುವೆ, ಬಿಸಿಸಿಐ ಸೂಚನೆಯಂತೆ ಕೊಲ್ಕತ್ತಾ ನೈಟ್ ರೈಡರ್ಸ್ (KKR) ತಂಡವು ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಫಿಝುರ್ ರೆಹಮಾನ್ ಅವರನ್ನು ತಂಡದಿಂದ ಬಿಡುಗಡೆ ಮಾಡಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಬಾಂಗ್ಲಾದೇಶ ಸರ್ಕಾರ ಕೌಂಟರ್ ಕ್ರಮಕ್ಕೆ ಮುಂದಾಗಿದೆ.

ಮುಸ್ತಫಿಝುರ್ ರೆಹಮಾನ್ ಅವರನ್ನು ಐಪಿಎಲ್ನಿಂದ ಕೈಬಿಟ್ಟಿರುವುದನ್ನು ತಮ್ಮ ದೇಶದ ಕ್ರಿಕೆಟಿಗರಿಗೆ ಮಾಡಿದ ಅವಮಾನ ಎಂದು ಪರಿಗಣಿಸಿರುವ ಬಾಂಗ್ಲಾದೇಶ ಸರ್ಕಾರ, ದೇಶದಲ್ಲಿ ಐಪಿಎಲ್ ಪಂದ್ಯಗಳ ಲೈವ್ ಪ್ರಸಾರವನ್ನು ನಿಷೇಧಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ. ಈ ಕುರಿತು ಕ್ರೀಡಾ ಸಚಿವಾಲಯದ ಉಸ್ತುವಾರಿ ಸಚಿವ ಆಸಿಫ್ ನಜ್ರುಲ್ ಸ್ಪಷ್ಟವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
“ಬಾಂಗ್ಲಾದೇಶದ ಆಟಗಾರನಿಗೆ ನಡೆದ ಅವಮಾನಕ್ಕೆ ಪ್ರತೀಕಾರವಾಗಿ, ನಮ್ಮ ದೇಶದಲ್ಲಿ ಐಪಿಎಲ್ ಪಂದ್ಯಗಳ ಪ್ರಸಾರವನ್ನು ನಿಲ್ಲಿಸುವಂತೆ ಮಾಹಿತಿ ಮತ್ತು ಪ್ರಸಾರ ಸಚಿವರನ್ನು ನಾನು ವಿನಂತಿಸಿದ್ದೇನೆ. ಯಾವುದೇ ಸಂದರ್ಭದಲ್ಲೂ ಬಾಂಗ್ಲಾದೇಶ, ನಮ್ಮ ಕ್ರಿಕೆಟ್ ಅಥವಾ ನಮ್ಮ ಕ್ರಿಕೆಟಿಗರ ಅವಮಾನವನ್ನು ನಾವು ಸಹಿಸುವುದಿಲ್ಲ. ಗುಲಾಮಗಿರಿಯ ದಿನಗಳು ಮುಗಿದಿವೆ” ಎಂದು ಆಸಿಫ್ ನಜ್ರುಲ್ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಂಬರುವ ಐಪಿಎಲ್ ಪಂದ್ಯಗಳು ಬಾಂಗ್ಲಾದೇಶದಲ್ಲಿ ಪ್ರಸಾರವಾಗುವ ಸಾಧ್ಯತೆ ಕಡಿಮೆಯಾಗಿದೆ. ಈಗಾಗಲೇ ಪಾಕಿಸ್ತಾನ ಸರ್ಕಾರ ಐಪಿಎಲ್ಗೆ ನಿಷೇಧ ಹೇರಿರುವುದರಿಂದ, ಬಾಂಗ್ಲಾದೇಶವೂ ಪಾಕ್ ಮಾದರಿಯಲ್ಲೇ ಐಪಿಎಲ್ ಲೈವ್ ಪ್ರಸಾರಕ್ಕೆ ಬ್ರೇಕ್ ಹಾಕುವ ಸಾಧ್ಯತೆ ಹೆಚ್ಚಾಗಿದೆ.
ಇದಕ್ಕೂ ಮೀರಿ, ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಬಾಂಗ್ಲಾದೇಶ ತಂಡದ ಪಂದ್ಯಗಳನ್ನು ಸ್ಥಳಾಂತರಿಸುವಂತೆ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಮನವಿ ಸಲ್ಲಿಸಿದೆ ಎನ್ನಲಾಗಿದೆ. ಈ ಬೆಳವಣಿಗೆಗಳು ಭಾರತ–ಬಾಂಗ್ಲಾದೇಶ ಕ್ರಿಕೆಟ್ ಸಂಬಂಧಗಳಲ್ಲಿ ಹೊಸ ವಿವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ.