ಸಿಡ್ನಿ, ಜ.03 (DaijiworldNews/TA): ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಣ ಐದು ಪಂದ್ಯಗಳ ಟೆಸ್ಟ್ ಸರಣಿಯ 5ನೇ ಹಾಗೂ ಅಂತಿಮ ಪಂದ್ಯಕ್ಕೆ ಸಿಡ್ನಿ ಕ್ರಿಕೆಟ್ ಸ್ಟೇಡಿಯಂ ಸಜ್ಜಾಗಿದೆ. ಈ ಪಂದ್ಯವನ್ನು ಪ್ರತಿವರ್ಷದಂತೆ ಈ ಬಾರಿ ಕೂಡ ‘ಪಿಂಕ್ ಟೆಸ್ಟ್’ ಎಂದು ಕರೆಯಲಾಗುತ್ತಿದ್ದು, ಇದು ಪಿಂಕ್ ಬಾಲ್ ಟೆಸ್ಟ್ ಅಲ್ಲ. ಬದಲಾಗಿ ಉಭಯ ತಂಡಗಳ ಆಟಗಾರರು ಪಿಂಕ್ ಕ್ಯಾಪ್ ಧರಿಸಿ ಕಣಕ್ಕಿಳಿಯಲಿದ್ದಾರೆ.

ಏನಿದು ಪಿಂಕ್ ಟೆಸ್ಟ್? : ಪ್ರತಿ ವರ್ಷ ಸಿಡ್ನಿಯಲ್ಲಿ ನಡೆಯುವ ಮೊದಲ ಟೆಸ್ಟ್ ಪಂದ್ಯವನ್ನು ಪಿಂಕ್ ಟೆಸ್ಟ್ ಎಂದು ಕರೆಯಲಾಗುತ್ತದೆ. ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವುದು ಹಾಗೂ ಈ ಕಾಯಿಲೆಯ ವಿರುದ್ಧ ಹೋರಾಡುತ್ತಿರುವವರಿಗೆ ಧೈರ್ಯ ತುಂಬುವುದೇ ಇದರ ಮುಖ್ಯ ಉದ್ದೇಶ. ಈ ವಿಶೇಷ ಪಂದ್ಯದಲ್ಲಿ ಆಟಗಾರರು ಪಿಂಕ್ ಕ್ಯಾಪ್ ಧರಿಸುವುದರ ಜೊತೆಗೆ, ಸ್ಟೇಡಿಯಂನ ಗ್ಯಾಲರಿಗಳನ್ನು ಪಿಂಕ್ ಬಣ್ಣಗಳಿಂದ ಅಲಂಕರಿಸಲಾಗುತ್ತದೆ.
ಈ ಅಭಿಯಾನಕ್ಕೆ ನಾಂದಿ ಹಾಡಿದ್ದು ಆಸ್ಟ್ರೇಲಿಯಾದ ಮಾಜಿ ವೇಗಿ ಗ್ಲೆನ್ ಮೆಕ್ಗ್ರಾತ್. ಅವರ ಪತ್ನಿ ಜೇನ್ ಮೆಕ್ಗ್ರಾತ್ ಸ್ತನ ಕ್ಯಾನ್ಸರ್ನಿಂದ ನಿಧನರಾದ ಬಳಿಕ, ಮೆಕ್ಗ್ರಾತ್ ಫೌಂಡೇಶನ್ ಸ್ಥಾಪಿಸಿ ಸ್ತನ ಕ್ಯಾನ್ಸರ್ ಜಾಗೃತಿ ಹಾಗೂ ಚಿಕಿತ್ಸೆಗಾಗಿ ನೆರವು ನೀಡುತ್ತಿದ್ದಾರೆ. ಸಿಡ್ನಿ ಕ್ರಿಕೆಟ್ ಸಂಸ್ಥೆಯ ಸಹಕಾರದಿಂದ ಪ್ರತಿವರ್ಷ ಪಿಂಕ್ ಟೆಸ್ಟ್ ಆಯೋಜಿಸಲಾಗುತ್ತಿದೆ.
ಸಿಡ್ನಿ ಟೆಸ್ಟ್ನ ಮೂರನೇ ದಿನ ಲೇಡೀಸ್ ಸ್ಟ್ಯಾಂಡ್ ಅನ್ನು ತಾತ್ಕಾಲಿಕವಾಗಿ ಜೇನ್ ಮೆಕ್ಗ್ರಾತ್ ಸ್ಟ್ಯಾಂಡ್ ಎಂದು ಮರುನಾಮಕರಣ ಮಾಡಲಾಗುತ್ತದೆ. ಇನ್ನು ಪಂದ್ಯದಲ್ಲಿ ಆಟಗಾರರು ಧರಿಸುವ ಪಿಂಕ್ ಕ್ಯಾಪ್ಗಳನ್ನು ಹರಾಜಿಗೆ ಇಡಲಾಗುತ್ತಿದ್ದು, ಅದರಿಂದ ಸಂಗ್ರಹವಾಗುವ ಹಣವನ್ನು ಸ್ತನ ಕ್ಯಾನ್ಸರ್ ಚಿಕಿತ್ಸೆಗೆ ಬಳಸಲಾಗುತ್ತದೆ.
ಸರಣಿ ಈಗಾಗಲೇ ಆಸ್ಟ್ರೇಲಿಯಾ ಪಾಲು : ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯನ್ನು ಆಸ್ಟ್ರೇಲಿಯಾ ತಂಡ ಈಗಾಗಲೇ 3–1 ಅಂತರದಲ್ಲಿ ವಶಪಡಿಸಿಕೊಂಡಿದೆ. ಆ್ಯಶಸ್ ಸರಣಿಯಲ್ಲಿ ಉಳಿದಿರುವ ಕೊನೆಯ ಟೆಸ್ಟ್ ನಾಳೆಯಿಂದ (ಜ.4) ಆರಂಭವಾಗಲಿದೆ. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಇಂಗ್ಲೆಂಡ್ ತಂಡ ಸೋಲಿನ ಅಂತರವನ್ನು ಕಡಿಮೆ ಮಾಡಿಕೊಳ್ಳಲು ಉದ್ದೇಶಿಸಿದೆ. ಅತ್ತ ಹೊಸ ವರ್ಷದ ಮೊದಲ ಟೆಸ್ಟ್ನಲ್ಲಿ ಜಯದೊಂದಿಗೆ ಸರಣಿಗೆ ತೆರೆ ಎಳೆಯಲು ಆಸ್ಟ್ರೇಲಿಯಾ ಕಣಕ್ಕಿಳಿಯಲಿದೆ. ಹೀಗಾಗಿ ರೋಚಕ ಪೈಪೋಟಿ ನಿರೀಕ್ಷಿಸಬಹುದು.
ಆಸ್ಟ್ರೇಲಿಯಾ ಟೆಸ್ಟ್ ತಂಡ : ಸ್ಟೀವ್ ಸ್ಮಿತ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಬ್ರೆಂಡನ್ ಡಾಗೆಟ್, ಕ್ಯಾಮರೋನ್ ಗ್ರೀನ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖ್ವಾಜಾ, ಮಾರ್ನಸ್ ಲ್ಯಾಬುಶೇನ್, ಟಾಡ್ ಮರ್ಫಿ, ಮೈಕೆಲ್ ನೇಸರ್, ಜ್ಯೆ ರಿಚರ್ಡ್ಸನ್, ಮಿಚೆಲ್ ಸ್ಟಾರ್ಕ್, ಜೇಕ್ ವೆದರಾಲ್ಡ್, ಬ್ಯೂ ವೆಬ್ಸ್ಟರ್.
ಇಂಗ್ಲೆಂಡ್ ಟೆಸ್ಟ್ ತಂಡ : ಬೆನ್ ಸ್ಟೋಕ್ಸ್ (ನಾಯಕ), ಹ್ಯಾರಿ ಬ್ರೂಕ್ (ಉಪನಾಯಕ), ಗಸ್ ಅಟ್ಕಿನ್ಸನ್, ಶೋಯೆಬ್ ಬಶೀರ್, ಜೇಕಬ್ ಬೆಥೆಲ್, ಬ್ರೈಡನ್ ಕಾರ್ಸ್, ಝಾಕ್ ಕ್ರಾಲಿ, ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಓಲಿ ಪೋಪ್, ಮ್ಯಾಥ್ಯೂ ಪಾಟ್ಸ್, ಜೋ ರೂಟ್, ಜೇಮಿ ಸ್ಮಿತ್, ಜೋಶ್ ಟಂಗ್, ಮಾರ್ಕ್ ವುಡ್. ಕ್ರಿಕೆಟ್ ರೋಮಾಂಚನದ ಜೊತೆಗೇ ಮಾನವೀಯ ಸಂದೇಶ ಸಾರುವ ಪಿಂಕ್ ಟೆಸ್ಟ್, ಈ ಬಾರಿ ಕೂಡ ಕ್ರೀಡಾಭಿಮಾನಿಗಳ ಗಮನ ಸೆಳೆಯಲಿದೆ.