ಮುಂಬೈ, ಜ.03 (DaijiworldNews/AK): ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಂಡದಿಂದ ಬಿಡುಗಡೆ ಮಾಡುವಂತೆ ಬಿಸಿಸಿಐ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮನವಿ ಮಾಡಿದೆ

ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಪ್ರತಿಕ್ರಿಯಿಸಿ, ಬಿಸಿಸಿಐ ಐಪಿಎಲ್ ಫ್ರಾಂಚೈಸಿಯಾದ ಕೆಕೆಆರ್ಗೆ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಮ್ಮ ತಂಡದಿಂದ ಬಿಡುಗಡೆ ಮಾಡುವಂತೆ ಸೂಚಿಸಿದೆ. ಅವರು ಬಿಡುಗಡೆಯಾದ ನಂತರ ಕೆಕೆಆರ್ನಿಂದ ಯಾವುದೇ ವಿನಂತಿ ಬಂದರೆ ಬಿಸಿಸಿಐ ಅದನ್ನು ಪರಿಗಣಿಸುತ್ತದೆ ಮತ್ತು ಬದಲಿ ಆಟಗಾರನನ್ನು ಒದಗಿಸುತ್ತದೆ ಎಂದು ಹೇಳಿದ್ದಾರೆ.
ಹಸೀನಾ ಸರ್ಕಾರ ಪತನದ ಬಳಿಕ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧ ಹಾಳಾಗಿದೆ. ಈಗ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿರುವ ಕಾರಣ ಬಾಂಗ್ಲಾದೇಶದ ಆಟಗಾರರು ಐಪಿಎಲ್ನಲ್ಲಿ ಆಡಬಾರದು ಎಂಬ ಆಕ್ರೋಶ ಕ್ರಿಕೆಟ್ ಅಭಿಮಾನಿಗಳಿಂದ ವ್ಯಕ್ತವಾಗಿತ್ತು. ಒತ್ತಡ ಜಾಸ್ತಿಯಾಗುತ್ತಿದ್ದಂತೆ ಬಿಸಿಸಿಐ ಈಗ ಮಧ್ಯಪ್ರವೇಶಿಸಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಕೈ ಬಿಡುವಂತೆ ಕೋಲ್ಕತ್ತಾ ತಂಡದ ಜೊತೆ ಕೇಳಿಕೊಂಡಿದೆ.
ಡಿಸೆಂಬರ್ನಲ್ಲಿ ನಡೆದ ಹರಾಜಿನಲ್ಲಿ ಮುಸ್ತಾಫಿಜುರ್ ಅವರನ್ನು ದಾಖಲೆಯ 9.20 ಕೋಟಿ ರೂ. ನೀಡಿ ಕೆಕೆಆರ್ ಖರೀದಿಸಿತ್ತು. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಬಾಂಗ್ಲಾ ಆಟಗಾರ ಎಂಬ ಹೆಗ್ಗಳಿಕೆಗೆ ಮುಸ್ತಾಫಿಜುರ್ ಪಾತ್ರವಾಗಿದ್ದರು