ನವದೆಹಲಿ, ಡಿ. 30 (DaijiworldNews/TA): ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್ (BBL) ಟೂರ್ನಿಯಿಂದ ಸ್ಟಾರ್ ಆಲ್ರೌಂಡರ್ ಟಿಮ್ ಡೇವಿಡ್ ಹೊರಬಿದ್ದಿದ್ದಾರೆ. ಪರ್ತ್ನಲ್ಲಿ ನಡೆದ ಬಿಗ್ ಬ್ಯಾಷ್ ಲೀಗ್ನ 12ನೇ ಪಂದ್ಯದಲ್ಲಿ ಹೋಬರ್ಟ್ ಹರಿಕೇನ್ಸ್ ಪರ ಆಡುತ್ತಿದ್ದ ವೇಳೆ ಬ್ಯಾಟಿಂಗ್ ಸಮಯದಲ್ಲಿ ಅವರಿಗೆ ಮಂಡಿರಜ್ಜು ಗಾಯ ಉಂಟಾಗಿದೆ.

ಗಾಯ ಗಂಭೀರ ಸ್ವರೂಪದಲ್ಲಿರುವ ಹಿನ್ನೆಲೆಯಲ್ಲಿ ವೈದ್ಯರು ಟಿಮ್ ಡೇವಿಡ್ ಅವರಿಗೆ ಹೆಚ್ಚಿನ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದಾರೆ. ಈ ಕಾರಣದಿಂದ ಅವರು ಬಿಗ್ ಬ್ಯಾಷ್ ಲೀಗ್ ಅನ್ನು ಅರ್ಧದಲ್ಲೇ ತೊರೆಯಬೇಕಾಯಿತು. ಇದರೊಂದಿಗೆ ಮುಂಬರುವ ಟಿ20 ವಿಶ್ವಕಪ್ನಲ್ಲಿ ಅವರ ಭಾಗವಹಿಸುವಿಕೆ ಕೂಡ ಅನುಮಾನಕ್ಕೆ ಒಳಗಾಗಿದೆ.
ಟಿ20 ವಿಶ್ವಕಪ್ ಫೆಬ್ರವರಿ 7ರಿಂದ ಆರಂಭವಾಗಲಿದ್ದು, ಆಸ್ಟ್ರೇಲಿಯಾ ತಂಡದಲ್ಲಿ ಟಿಮ್ ಡೇವಿಡ್ ಆಯ್ಕೆ ಆಗುವುದು ಬಹುತೇಕ ಖಚಿತವಾಗಿತ್ತು. ಆದರೆ ಈ ಗಾಯ ಇದೀಗ ಕ್ರಿಕೆಟ್ ಆಸ್ಟ್ರೇಲಿಯಾ ಆಯ್ಕೆ ಸಮಿತಿಗೆ ತಲೆನೋವಾಗಿದ್ದು, ಅವರ ಫಿಟ್ನೆಸ್ ಸ್ಥಿತಿಯನ್ನು ನಿಗಾ ವಹಿಸಿ ಅಂತಿಮ ನಿರ್ಧಾರ ಕೈಗೊಳ್ಳಲು ಚರ್ಚೆ ನಡೆಸಲಾಗಿದೆ ಎಂದು ವರದಿಯಾಗಿದೆ. ಇನ್ನೂ ಟಿ20 ವಿಶ್ವಕಪ್ಗೆ ಸುಮಾರು ಒಂದು ತಿಂಗಳ ಕಾಲಾವಕಾಶ ಇರುವುದರಿಂದ, ಟಿಮ್ ಡೇವಿಡ್ ಅವರನ್ನು ಪ್ರಾಥಮಿಕ ತಂಡಕ್ಕೆ ಆಯ್ಕೆ ಮಾಡಿ, ಪೂರ್ಣ ಫಿಟ್ನೆಸ್ ಸಾಧಿಸದಿದ್ದಲ್ಲಿ ನಂತರ ತಂಡದಿಂದ ಹೊರಗಿಡುವ ಸಾಧ್ಯತೆಯನ್ನೂ ಆಯ್ಕೆ ಸಮಿತಿ ಪರಿಗಣಿಸುತ್ತಿದೆ ಎನ್ನಲಾಗಿದೆ.
ಒಂದು ವೇಳೆ ಟಿ20 ವಿಶ್ವಕಪ್ ವೇಳೆಗೆ ಟಿಮ್ ಡೇವಿಡ್ ಸಂಪೂರ್ಣವಾಗಿ ಚೇತರಿಸಿಕೊಳ್ಳದಿದ್ದರೆ, ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲೂ ಕಣಕ್ಕಿಳಿಯುವುದು ಅನುಮಾನವಾಗಿದೆ. ಪ್ರಮುಖ ಅಂತಾರಾಷ್ಟ್ರೀಯ ಟೂರ್ನಿಯಿಂದ ಹೊರಗುಳಿದ ಆಟಗಾರರು ಸಂಪೂರ್ಣ ಫಿಟ್ನೆಸ್ ಸಾಧಿಸುವವರೆಗೆ ಕ್ರಿಕೆಟ್ ಆಸ್ಟ್ರೇಲಿಯಾ ಎನ್ಒಸಿ ನೀಡುವುದಿಲ್ಲ. ಹೀಗಾಗಿ ಟಿ20 ವಿಶ್ವಕಪ್ಗೆ ಅಲಭ್ಯರಾದರೆ, ಟಿಮ್ ಡೇವಿಡ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದಿಂದಲೂ ಹೊರಗುಳಿಯುವ ಸಾಧ್ಯತೆ ಇದೆ. ಟಿಮ್ ಡೇವಿಡ್ ಗಾಯದ ಸ್ಥಿತಿ ಮುಂದಿನ ದಿನಗಳಲ್ಲಿ ಆಸ್ಟ್ರೇಲಿಯಾ ಹಾಗೂ ಐಪಿಎಲ್ ತಂಡಗಳ ತೀರ್ಮಾನದಲ್ಲಿ ಪ್ರಮುಖ ಪಾತ್ರ ವಹಿಸುವುದು ಸ್ಪಷ್ಟವಾಗಿದೆ.