ಕೊಲಂಬೋ, ಡಿ. 16 (DaijiworldNews/AA): ಕಚ್ಚಾ ತೈಲ ಖರೀದಿಯಲ್ಲಿ ಭ್ರಷ್ಟಾಚಾರ ಎಸೆಗಿರುವುದು ಸಾಬೀತಾಗಿರುವ ಹಿನ್ನೆಲೆ 1996 ರ ಏಕದಿನ ವಿಶ್ವಕಪ್ ಚಾಂಪಿಯನ್ ಶ್ರೀಲಂಕಾ ತಂಡದ ಮಾಜಿ ನಾಯಕ ಅರ್ಜುನ ರಣತುಂಗಗೆ ಬಂಧನದ ಭೀತಿ ಎದುರಾಗಿದೆ.

2017 ರಲ್ಲಿ ಅರ್ಜುನ ರಣತುಂಗ ಶ್ರೀಲಂಕಾ ಸರ್ಕಾರದಲ್ಲಿ ಪೆಟ್ರೋಲಿಯಂ ಮತ್ತು ಕೈಗಾರಿಕಾ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಈ ವೇಳೆ ಸರ್ಕಾರಿ ಸಂಸ್ಥೆಯಾದ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್ (ಸಿಪಿಸಿ) ಕಚ್ಚಾ ತೈಲ ಖರೀದಿಯ ಟೆಂಡರ್ನಲ್ಲಿ ಲಂಚ ಹಾಗು ಭ್ರಷ್ಟಾಚಾರ ಎಸಗಿರುವುದು ತನಿಖೆಯಲ್ಲಿ ಕಂಡು ಬಂದಿದೆ. ಇದೀಗ ಕಚ್ಚಾ ತೈಲ ಖರೀದಿಯಲ್ಲಿ ಭ್ರಷ್ಟಾಚಾರ ಎಸೆಗಿರುವುದು ಸಾಬೀತಾಗಿರುವ ಹಿನ್ನೆಲೆ ರಣತುಂಬ ಅವರ ಬಂಧನಕ್ಕೆ ಶ್ರೀಲಂಕಾ ಸರ್ಕಾರ ಮುಂದಾಗಿದೆ.
ಅರ್ಜುನ ರಣತುಂಗ ಅವರ ಜೊತೆಗೆ, ಅವರ ಹಿರಿಯ ಸಹೋದರ ದಮ್ಮಿಕಾ ಕೂಡ ಈ ಆರೋಪದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದೆ. ರಣತುಂಗ ಸಚಿವರಾಗಿದ್ದ ವೇಳೆ ದಮ್ಮಿಕಾ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್ನ ಅಧ್ಯಕ್ಷರಾಗಿದ್ದರು. ಪೊಲೀಸರು ದಮ್ಮಿಕಾ ಅವರನ್ನು ಭ್ರಷ್ಟಾಚಾರ ಆರೋಪದ ಮೇಲೆ ಬಂಧಿಸಿದ್ದರು. ನಂತರ ಅವರಿಗೆ ಜಾಮೀನು ನೀಡಲಾಯಿತು.