ಮುಂಬೈ, ನ. 17 (DaijiworldNews/AK):ಟೆಸ್ಟ್ ಕ್ರಿಕೆಟ್ ಶುರುವಾಗಿ ಬರೋಬ್ಬರಿ 148 ವರ್ಷಗಳಾಗಿವೆ. ಈ 148 ವರ್ಷಗಳಲ್ಲಿ ಯಾರಿಂದಲೂ ಸಾಧ್ಯವಾಗದ ವಿಶೇಷ ವಿಶ್ವ ದಾಖಲೆಯೊಂದನ್ನು ಸೌತ್ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ನಿರ್ಮಿಸಿದ್ದಾರೆ.

ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವು 30 ರನ್ಗಳ ಜಯ ಸಾಧಿಸಿತು. ಇದು ಟೆಂಬಾ ಬವುಮಾ ನಾಯಕತ್ವದಲ್ಲಿ ಸೌತ್ ಆಫ್ರಿಕಾ ತಂಡದ 10ನೇ ಟೆಸ್ಟ್ ಗೆಲುವು. ವಿಶೇಷ ಎಂದರೆ ಬವುಮಾ ಮುಂದಾಳತ್ವದಲ್ಲಿ 11 ಟೆಸ್ಟ್ ಪಂದ್ಯಗಳನ್ನಾಡಿರುವ ಸೌತ್ ಆಫ್ರಿಕಾ ಒಂದೇ ಒಂದು ಮ್ಯಾಚ್ನಲ್ಲಿ ಸೋತಿಲ್ಲ.
ಇದರೊಂದಿಗೆ ಟೆಸ್ಟ್ ಇತಿಹಾಸದಲ್ಲೇ ಒಂದೇ ಒಂದು ಟೆಸ್ಟ್ ಪಂದ್ಯ ಸೋಲದೇ ಮೊದಲ 10 ಮ್ಯಾಚ್ಗಳನ್ನು ಗೆದ್ದ ವಿಶ್ವದ ಮೊದಲ ಕ್ಯಾಪ್ಟನ್ ಎಂಬ ವಿಶ್ವ ದಾಖಲೆಯನ್ನು ಟೆಂಬಾ ಬವುಮಾ ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ ಅತೀ ಕಡಿಮೆ ಪಂದ್ಯಗಳ ಮೂಲಕ ಮೊದಲ 10 ಗೆಲುವು ಕಂಡ ನಾಯಕನೆಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಇದಕ್ಕೂ ಮುನ್ನ ಇಂತಹದೊಂದು ವಿಶೇಷ ದಾಖಲೆ ಇಂಗ್ಲೆಂಡ್ನ ಬೆನ್ ಸ್ಟೋಕ್ಸ್ ಹಾಗೂ ಆಸ್ಟ್ರೇಲಿಯಾದ ಲಿಂಡೆ ಹಸ್ಸೆಟ್ ಹೆಸರಿನಲ್ಲಿತ್ತು.