ಮುಂಬೈ, ನ. 15 (DaijiworldNews/AA): ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಮಿನಿ ಹರಾಜಿಗೂ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಸಿಎಸ್ಕೆ ತಂಡದಿಂದ ಮೂವರು ವಿದೇಶಿ ಆಟಗಾರರನ್ನು ಬಿಡುಗಡೆ ಮಾಡಲು ಮುಂದಾಗಿದೆ.

ತಂಡದ ಪ್ರಮುಖ ವೇಗಿ ಮತೀಶ ಪತಿರಾಣ, ನ್ಯೂಝಿಲೆಂಡ್ ಆಟಗಾರರಾದ ಡೆವೊನ್ ಕಾನ್ವೆ ಹಾಗೂ ರಚಿನ್ ರವೀಂದ್ರ ಅವರನ್ನು ಸಹ ಸಿಎಸ್ಕೆ ರಿಲೀಸ್ ಮಾಡಲಿದೆ. ಇದರೊಂದಿಗೆ ಸಿಎಸ್ಕೆ ತಂಡದಿಂದ ಮೂವರು ವಿದೇಶಿ ಆಟಗಾರರು ಹೊರಬೀಳುವುದು ಖಚಿತವಾಗಿದೆ.
ಪತಿರಾಣ ಅವರನ್ನು ತಂಡದಿಂದ ರಿಲೀಸ್ ಮಾಡಲು ಸಿಎಸ್ಕೆ ನಿರ್ಧರಿಸಿದ್ದು, ಅವರ ಬದಲಿಗೆ ಬೇರೊಬ್ಬ ವೇಗಿಯನ್ನು ಖರೀದಿಸಲು ಪ್ಲ್ಯಾನ್ ರೂಪಿಸಿದೆ. ಕಳೆದ ಸೀಸನ್ನಲ್ಲಿ ಪತಿರಾಣ 12 ಪಂದ್ಯಗಳನ್ನಾಡಿದ್ದು, ಕೇವಲ 13 ವಿಕೆಟ್ಗಳನ್ನು ಮಾತ್ರ ಪಡೆದಿದ್ದರು. ಜೊತೆಗೆ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿರುವ ಮತೀಶ ಪತಿರಾಣ ಅವರನ್ನು ತಂಡದಲ್ಲಿ ಉಳಿಸಿಕೊಳ್ಳದಿರಲು ಸಿಎಸ್ಕೆ ನಿರ್ಧರಿಸಿದೆ.
ಇನ್ನು ಪತಿರಾಣ ಅವರನ್ನು ಬಿಡುಗಡೆ ಮಾಡುವುದರಿಂದ ಸಿಎಸ್ಕೆ ಫ್ರಾಂಚೈಸಿಯ ಹರಾಜು ಮೊತ್ತಕ್ಕೆ 13 ಕೋಟಿ ರೂ. ಸೇರ್ಪಡೆಯಾಗಲಿದೆ. ಮತೀಶ ಪತಿರಾಣ, ಡೆವೊನ್ ಕಾನ್ವೆ ಹಾಗೂ ರಚಿನ್ ರವೀಂದ್ರ ಅಲ್ಲದೆ, ಸಿಎಸ್ಕೆ ರವೀಂದ್ರ ಜಡೇಜಾ ಹಾಗೂ ಸ್ಯಾಮ್ ಕರನ್ ಅವರನ್ನು ನೀಡಿ ರಾಜಸ್ಥಾನ್ ರಾಯಲ್ಸ್ ತಂಡದಿಂದ ಸಂಜು ಸ್ಯಾಮ್ಸನ್ ಅವರನ್ನು ಖರೀದಿ ಮಾಡಿದೆ.