ಕೊಲಂಬೊ, ನ. 13 (DaijiworldNews/AA): ಪಾಕಿಸ್ತಾನ್ ವಿರುದ್ಧದ ಏಕದಿನ ಸರಣಿಯನ್ನು ಅರ್ಧದಲ್ಲೇ ಮೊಟಕುಗೊಳಿಸಿ ತವರಿಗೆ ಹಿಂತಿರುಗಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಎಚ್ಚರಿಸಿದೆ. ಈ ಎಚ್ಚರಿಕೆಯ ಹೊರತಾಗಿಯೂ ಯಾರಾದರು ಪಾಕಿಸ್ತಾನ್ ವಿರುದ್ಧದ ಸರಣಿಯಿಂದ ಹಿಂದೆ ಸರಿದರೆ, ಅವರನ್ನು 2 ವರ್ಷಗಳ ಕಾಲ ಬ್ಯಾನ್ ಮಾಡಲಾಗುತ್ತದೆ ಎಂದು ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಹೇಳಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.

ಮಂಗಳವಾರ ಇಸ್ಲಾಮಾಬಾದ್ನಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯ ನಂತರ ಶ್ರೀಲಂಕಾ ತಂಡದ ಕೆಲ ಆಟಗಾರರು ಶ್ರೀಲಂಕಾಗೆ ಮರಳಲು ಮುಂದಾಗಿದ್ದರು. ಪಾಕ್ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದ ಕೆಲ ಆಟಗಾರರು ತಮ್ಮ ಸುರಕ್ಷತಾ ಕಾಳಜಿಯನ್ನು ಉಲ್ಲೇಖಿಸಿ ತವರಿಗೆ ಮರಳಲು ಲಂಕಾ ಕ್ರಿಕೆಟ್ ಬೋರ್ಡ್ಗೆ ಮನವಿ ಸಲ್ಲಿಸಿದ್ದರು.
ಈ ಮನವಿಯ ಹೊರತಾಗಿಯೂ ಪ್ರವಾಸಿ ತಂಡದ ಪ್ರತಿಯೊಬ್ಬ ಸದಸ್ಯರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮತ್ತು ಸಂಬAಧಿತ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇವೆ ಎಂದು ಶ್ರೀಲಂಕಾ ಕ್ರಿಕೆಟ್ ಬೋರ್ಡ್ ತಿಳಿಸಿತ್ತು.
ಆದರೆ ಶ್ರೀಲಂಕಾ ಕ್ರಿಕೆಟ್ ಬೋರ್ಡ್ನ ಈ ನಡೆಯಿಂದ ಕೆಲ ಆಟಗಾರರಿಗೆ ಬೇಸರ ಉಂಟಾಗಿದೆ. ಅಲ್ಲದೆ ತವರಿಗೆ ಹಿಂತಿರುಗಲು ವ್ಯವಸ್ಥೆಯನ್ನು ಮಾಡಿಕೊಡಲು ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಶ್ರೀಲಂಕಾ ಕ್ರಿಕೆಟ್ ಮಂಡಳಿ ಪಾಕಿಸ್ತಾನ್ ವಿರುದ್ಧದ ಸರಣಿಯನ್ನು ಮುಂದುವರೆಸುವಂತೆ ಸೂಚಿಸಿದೆ. ಅಷ್ಟೇ ಅಲ್ಲದೆ ಟೂರ್ನಿಯನ್ನು ಮೊಟಕುಗೊಳಿಸಿದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.
ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಮೂಲಗಳ ಪ್ರಕಾರ, ಪಾಕಿಸ್ತಾನ ಪ್ರವಾಸವನ್ನು ಅರ್ಧದಲ್ಲೇ ಕೈಬಿಡುವ ಆಟಗಾರರಿಗೆ ಎರಡು ವರ್ಷಗಳ ನಿಷೇಧ ಹೇರಲು ನಿರ್ಧರಿಸಲಾಗಿದೆ. ಇದರ ಹೊರತಾಗಿಯೂ ಕೆಲ ಆಟಗಾರರು ತವರಿಗೆ ಮರಳಲು ಇಚ್ಛಿಸಿದ್ದಾರೆ ಎಂದು ವರದಿಯಾಗಿದೆ. ಇದರ ಬೆನ್ನಲ್ಲೇ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಬದಲಿ ಆಟಗಾರರನ್ನು ಕಳುಹಿಸಿ ಸರಣಿಯನ್ನು ಪೂರ್ಣಗೊಳಿಸುವುದಾಗಿ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ಗೆ ಭರವಸೆ ನೀಡಿದೆ.