ಖೈಬರ್ ಪಖ್ತೂನ್ಖ್ವಾ, ನ. 11 (DaijiworldNews/AA): ಪಾಕಿಸ್ತಾನ್ ತಂಡದ ಯುವ ವೇಗದ ಬೌಲರ್ ನಸೀಮ್ ಶಾ ಅವರ ಖೈಬರ್ ಪಖ್ತೂನ್ಖ್ವಾದ ಲೋವರ್ ದಿರ್ನಲ್ಲಿರುವ ಮನೆಯ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆದಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.

ನಸೀಮ್ ಶಾ ಅವರ ಮನೆಯ ಮೇಲೆ ಬಹಿರಂಗವಾಗಿ ಗುಂಡು ಹಾರಿಸಲಾಗಿದ್ದು, ದಾಳಿಯಲ್ಲಿ ಹಲವಾರು ವಸ್ತುಗಳು ಹಾನಿಗೊಳಗಾಗಿವೆ. ದಾಳಿಯಲ್ಲಿ ಅವರ ಮನೆಯ ಕಿಟಕಿಗಳು, ಮುಖ್ಯ ದ್ವಾರ ಮತ್ತು ಪಾರ್ಕಿಂಗ್ ಪ್ರದೇಶವು ತೀವ್ರವಾಗಿ ಹಾನಿಗೊಂಡಿವೆ.
ಈ ದಾಳಿ ವೇಳೆ ನಸೀಮ್ ಶಾ ಅವರ ಪೋಷಕರು ಹಾಗೂ ಕೆಲ ಕುಟುಂಬಸ್ಥರು ಮಾತ್ರ ಮನೆಯಲ್ಲಿದ್ದರು. ಅದೃಷ್ಟವಶಾತ್ ಅವರ ಪ್ರಾಣಕ್ಕೆ ಯಾವುದೇ ಹಾನಿಯಾಗಿಲ್ಲ.
ದಾಳಿಗೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಅಲ್ಲದೆ ನಸೀಮ್ ಶಾ ಅವರ ಮನೆಗೆ ಪೊಲೀಸರು ಹೆಚ್ಚಿನ ಭದ್ರತೆಯನ್ನು ಒದಗಿಸಿದ್ದಾರೆ. ಇದೀಗ ತನಿಖೆಯನ್ನು ಪೊಲೀಸರು ಕೈಗೆತ್ತಿಕೊಂಡಿದ್ದಾರೆ.
ದಾಳಿಯ ಸಮಯದಲ್ಲಿ ನಸೀಮ್ ಶಾ ಪಾಕಿಸ್ತಾನ್ ತಂಡದೊಂದಿಗೆ ರಾವಲ್ಪಿಂಡಿಯಲ್ಲಿದ್ದರು. ನವೆಂಬರ್ 11 - 15 ರವರೆಗೆ ನಡೆಯಲಿರುವ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ನಸೀಮ್ ಶಾ ಆಭ್ಯಾಸದಲ್ಲಿ ತೊಡಗಿದ್ದಾರೆ.