ಬೆಂಗಳೂರು, ನ. 09 (DaijiworldNews/TA): ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯನ್ನು ಟೀಮ್ ಇಂಡಿಯಾ 2-1 ಅಂತರದಿಂದ ಗೆದ್ದುಕೊಂಡಿದೆ. ಮೊದಲ ಹಾಗೂ ಕೊನೆಯ ಪಂದ್ಯ ಮಳೆಗೆ ಆಹುತಿಯಾದರೂ, ದ್ವಿತೀಯ ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದ ನಂತರ ಮೂರನೇ ಮತ್ತು ನಾಲ್ಕನೇ ಪಂದ್ಯಗಳಲ್ಲಿ ಭಾರತ ತಂಡ ವೀರ ಜಯ ಸಾಧಿಸಿತು. ಈ ಮೂಲಕ ಸರಣಿ ಗೆಲುವಿನ ಟ್ರೋಫಿ ಭಾರತದ ಮುಡಿಗೇರಿತು.

ಸರಣಿ ಅಂತ್ಯದಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಟ್ರೋಫಿ ಎತ್ತಿ ಹಿಡಿದ ಕ್ಷಣ ಎಲ್ಲರ ಗಮನ ಸೆಳೆಯಿತು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಗುಮುಖದಿಂದ, “ಕೊನೆಗೂ ಟ್ರೋಫಿಯನ್ನು ಮುಟ್ಟಲು ಅವಕಾಶ ಸಿಕ್ಕಿದೆ, ತುಂಬಾ ಖುಷಿ ಆಗಿದೆ,” ಎಂದು ವ್ಯಂಗ್ಯಭರಿತವಾಗಿ ಹೇಳಿದರು.
ಈ ಮಾತಿನ ಹಿಂದೆ ಏಷ್ಯಾಕಪ್ ಟ್ರೋಫಿ ವಿವಾದದ ನೆನಪು ಅಡಗಿತ್ತು. ದುಬೈನಲ್ಲಿ ನಡೆದ ಏಷ್ಯಾಕಪ್ ಫೈನಲ್ನಲ್ಲಿ ಪಾಕಿಸ್ತಾನ್ ವಿರುದ್ಧ ಜಯಗಳಿಸಿದ ಭಾರತ ತಂಡ ಟ್ರೋಫಿ ಗೆದ್ದಿದ್ದರೂ, ಎಸಿಸಿ ಅಧ್ಯಕ್ಷ ಹಾಗೂ ಪಾಕಿಸ್ತಾನ ಸಚಿವ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಭಾರತ ನಿರಾಕರಿಸಿತ್ತು.
ಭಾರತ ಮತ್ತು ಪಾಕಿಸ್ತಾನದ ರಾಜಕೀಯ ಉದ್ವಿಗ್ನತೆಯ ನಡುವೆಯೇ ನಖ್ವಿ ಟ್ರೋಫಿಯನ್ನು ತಂಡಕ್ಕೆ ನೀಡದೇ ಹೊಟೇಲ್ಗೆ ಕಳುಹಿಸಿದ್ದರು ಎಂದು ವರದಿಗಳು ತಿಳಿಸಿವೆ. ಈ ಕಾರಣದಿಂದ ಟೀಮ್ ಇಂಡಿಯಾ ಆಟಗಾರರು ಟ್ರೋಫಿ ಇಲ್ಲದೇ ಸಂಭ್ರಮಿಸಿದ್ದರು.
ಈ ಘಟನೆ ಬಳಿಕವೂ ಟ್ರೋಫಿ ಭಾರತಕ್ಕೆ ಹಿಂತಿರುಗಿಲ್ಲ ಎಂಬುದು ಸುದ್ದಿಯಾಗಿದ್ದು, ಬಿಸಿಸಿಐ ಈ ಕುರಿತು ಐಸಿಸಿಗೆ ದೂರು ಸಲ್ಲಿಸಿದೆ. ಇದೀಗ ಆಸ್ಟ್ರೇಲಿಯಾ ಸರಣಿಯಲ್ಲಿ ತನ್ನ ನಾಯಕತ್ವದಲ್ಲಿ ಜಯ ಸಾಧಿಸಿರುವ ಸೂರ್ಯಕುಮಾರ್ ಯಾದವ್, “ಟ್ರೋಫಿ ಮುಟ್ಟಲು ಸಿಕ್ಕಿದೆ” ಎನ್ನುವ ಹೇಳಿಕೆಯ ಮೂಲಕ ಮೊಹ್ಸಿನ್ ನಖ್ವಿ ಅವರ ಮೇಲಿನ ವ್ಯಂಗ್ಯವನ್ನು ತೋರಿಸಿದ್ದಾರೆ.