ಬೆಂಗಳೂರು, ನ. 08 (DaijiworldNews/TA): ಇಂಡಿಯನ್ ಪ್ರೀಮಿಯರ್ ಲೀಗ್ (IPL) ಸೀಸನ್–19 ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿಯ ಹೊಸ ಮಾಲೀಕರು ಯಾರು ಎಂಬ ಕುತೂಹಲ ತೀವ್ರಗೊಂಡಿದೆ. ಈ ಫ್ರಾಂಚೈಸಿಯ ಖರೀದಿಗೆ ಈಗಾಗಲೇ ಹಲವು ಪ್ರಮುಖ ಉದ್ಯಮಿಗಳು ಆಸಕ್ತಿ ತೋರಿದ್ದಾರೆ. ದಿನ ಕಳೆದಂತೆ ಆಸಕ್ತಿದಾರರ ಪಟ್ಟಿ ಉದ್ದವಾಗುತ್ತಿದ್ದು, ಬಿಲಿಯನೇರ್ಗಳ ನಡುವೆ ಭರ್ಜರಿ ಪೈಪೋಟಿ ನಡೆಯುವ ಸಾಧ್ಯತೆ ಕಂಡು ಬರುತ್ತಿದೆ.

ಕರ್ನಾಟಕದ ಉದ್ಯಮಿಗಳಾದ ಝೆರೋಧಾ ಕಂಪೆನಿಯ ಸಹ–ಸಂಸ್ಥಾಪಕ ನಿಖಿಲ್ ಕಾಮತ್ ಮತ್ತು ಮಣಿಪಾಲ್ ಎಜುಕೇಶನ್ ಅಂಡ್ ಮೆಡಿಕಲ್ ಗ್ರೂಪ್ (MEMG) ಅಧ್ಯಕ್ಷ ರಂಜನ್ ಪೈ ಅವರು ಆರ್ಸಿಬಿ ಫ್ರಾಂಚೈಸಿ ಖರೀದಿಗೆ ಆಸಕ್ತಿ ತೋರಿದ್ದಾರೆ. ವರದಿ ಪ್ರಕಾರ, ಈ ಇಬ್ಬರು ಉದ್ಯಮಿಗಳು ಆರ್ಸಿಬಿ ಫ್ರಾಂಚೈಸಿಯನ್ನು ಕರ್ನಾಟಕದಲ್ಲೇ ಉಳಿಸುವ ಉದ್ದೇಶದಿಂದ ಬಿಡ್ಡಿಂಗ್ ಪ್ರಕ್ರಿಯೆಗೆ ಸಜ್ಜಾಗಿದ್ದಾರೆ. ಇವರ ಪ್ರಯತ್ನದಿಂದ ತಂಡದ ಮಾಲಿಕತ್ವ ಮರು ಕರ್ನಾಟಕದ ಕೈಗಳಲ್ಲಿ ಉಳಿಯುವ ನಿರೀಕ್ಷೆ ಮೂಡಿದೆ.
ನಿಖಿಲ್ ಕಾಮತ್ ಅವರ ಆಪ್ತರಾಗಿರುವ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದಾರ್ ಪೂನವಾಲಾ ಕೂಡ ಆರ್ಸಿಬಿ ಫ್ರಾಂಚೈಸಿ ಖರೀದಿಗೆ ಆಸಕ್ತಿ ತೋರಿದ್ದಾರೆ. ಹೀಗಾಗಿ ನಿಖಿಲ್ ಕಾಮತ್, ರಂಜನ್ ಪೈ ಮತ್ತು ಆದಾರ್ ಪೂನವಾಲಾ ತ್ರಯ ಒಟ್ಟಾಗಿ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಮೂವರು ಕೈಜೋಡಿಸಿದರೆ ಆರ್ಸಿಬಿ ಮಾಲಿಕತ್ವಕ್ಕಾಗಿ ಬಲಿಷ್ಠ ಕರ್ನಾಟಕ–ಪೂನವಾಲಾ ಒಕ್ಕೂಟವೊಂದು ರೂಪುಗೊಳ್ಳಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.
ಇದರ ಜೊತೆಗೆ, ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ಸಹ–ಮಾಲೀಕರಾದ ಪಾರ್ಥ್ ಜಿಂದಾಲ್ ಅವರ ಜೆಎಸ್ಡಬ್ಲ್ಯೂ ಗ್ರೂಪ್ ಕೂಡ ಆರ್ಸಿಬಿ ಫ್ರಾಂಚೈಸಿಗಾಗಿ ಕಣ್ಣು ಹಾಯಿಸಿದೆ. ಪಾರ್ಥ್ ಜಿಂದಾಲ್ ನೇತೃತ್ವದ ಜೆಎಸ್ಡಬ್ಲ್ಯೂ ತಂಡ ಈ ಬಾರಿ ಬಲಿಷ್ಠ ಬಿಡ್ಡಿಂಗ್ ಮಾಡಲು ಸಿದ್ಧವಾಗಿದೆ ಎಂದು ವರದಿಯಾಗಿದೆ. ಇದೇ ರೀತಿಯಾಗಿ, ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ ಕೂಡ ಐಪಿಎಲ್ನಲ್ಲಿ ಅಧಿಕೃತ ಪ್ರವೇಶ ಪಡೆಯಲು ಆರ್ಸಿಬಿ ಖರೀದಿಯನ್ನು ಗುರಿಯಾಗಿಸಿಕೊಂಡಿದೆ.
ಈ ಪ್ರಮುಖ ಉದ್ಯಮಿಗಳೊಂದಿಗೆ ದೇವಯಾನಿ ಇಂಟರ್ನ್ಯಾಷನಲ್ ಗ್ರೂಪ್ (ರವಿಕಾಂತ್ ಜೈಪುರಿಯಾ) ಮತ್ತು ಅಮೆರಿಕದ ಖಾಸಗಿ ಹೂಡಿಕೆ ಕಂಪೆನಿಯೂ ಆರ್ಸಿಬಿ ಫ್ರಾಂಚೈಸಿ ಖರೀದಿಗೆ ಆಸಕ್ತಿ ತೋರಿವೆ. ಈ ಅಮೆರಿಕನ್ ಕಂಪೆನಿ ಪ್ರಸ್ತುತ ಡಿಯಾಜಿಯೊ ಸಂಸ್ಥೆಯೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ವರದಿಯಾಗಿದೆ.
ಹೀಗಾಗಿ, ನಿಖಿಲ್ ಕಾಮತ್, ರಂಜನ್ ಪೈ, ಆದಾರ್ ಪೂನವಾಲಾ, ಪಾರ್ಥ್ ಜಿಂದಾಲ್, ಗೌತಮ್ ಅದಾನಿ, ರವಿಕಾಂತ್ ಜೈಪುರಿಯಾ ಹಾಗೂ ಅಮೆರಿಕದ ಹೂಡಿಕೆ ಕಂಪೆನಿಗಳ ಪೈಪೋಟಿಯಲ್ಲಿ ಈ ಬಾರಿ ಆರ್ಸಿಬಿ ಫ್ರಾಂಚೈಸಿಯ ಮಾಲಿಕತ್ವದ ಹಕ್ಕು ಯಾರ ಪಾಲಾಗಲಿದೆ ಎಂಬುದು ಕಾದು ನೋಡಬೇಕಾಗಿದೆ.