ನವದೆಹಲಿ, ನ. 06 (DaijiworldNews/TA): ವಿಶ್ವಕಪ್ ಗೆದ್ದ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಬುಧವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ತಮ್ಮ ಯಶಸ್ಸಿನ ಕ್ಷಣಗಳನ್ನು ಹಂಚಿಕೊಂಡಿತು. ದೆಹಲಿಯ ಲೋಕ ಕಲ್ಯಾಣ್ ಮಾರ್ಗದಲ್ಲಿರುವ ಪ್ರಧಾನಿ ಅವರ ಅಧಿಕೃತ ನಿವಾಸದಲ್ಲಿ ನಡೆದ ಈ ವಿಶೇಷ ಸಂವಾದ ಹಾಸ್ಯ, ಸಂತೋಷ ಮತ್ತು ಹೆಮ್ಮೆಯ ಕ್ಷಣಗಳಿಂದ ಕೂಡಿತ್ತು.

ಸಂವಾದದ ಮಧ್ಯದಲ್ಲಿ ಹರ್ಲೀನ್ ಡಿಯೋಲ್ ಪ್ರಧಾನ ಮಂತ್ರಿಯವರಿಗೆ ಅಚ್ಚರಿಯ ಪ್ರಶ್ನೆ ಕೇಳಿದರು “ಸರ್, ನಿಮ್ಮ ಚರ್ಮ ಯಾವಾಗಲೂ ಹೊಳೆಯುತ್ತಿರುತ್ತದೆ. ದಯವಿಟ್ಟು ನಿಮ್ಮ ಚರ್ಮದ ಆರೈಕೆ ಹೇಗೆಂದು ತಿಳಿಸುವಿರಾ?” . ಹರ್ಲೀನ್ ಈ ಹಾಸ್ಯಾಸ್ಪದ ಪ್ರಶ್ನೆ ಕೇಳುತ್ತಿದ್ದಂತೆಯೇ ಸಭಾಂಗಣದಲ್ಲಿ ನಗುವಿನ ಅಲೆ ಎದ್ದಿತು. ಪ್ರಧಾನಿ ಮೋದಿ ಕೂಡಾ ನಗು ತಡೆಕೊಳ್ಳದೆ, “ನಾನು ಅದೆಲ್ಲದರ ಬಗ್ಗೆ ಯೋಚಿಸುವುದಿಲ್ಲ,” ಎಂದು ಸರಳವಾಗಿ ಉತ್ತರಿಸಿದರು.
ಈ ವೇಳೆ ಆಲ್ರೌಂಡರ್ ಸ್ನೇಹ್ ರಾಣಾ ತಕ್ಷಣ ಮಧ್ಯಪ್ರವೇಶಿಸಿ, “ಸರ್, ನಿಮ್ಮ ಚರ್ಮದ ಈ ಹೊಳಪಿಗೆ ಕೋಟ್ಯಂತರ ಭಾರತೀಯರ ಪ್ರೀತಿ ಮತ್ತು ಆಶೀರ್ವಾದವೇ ಕಾರಣ” ಎಂದು ಹೇಳಿದರು. ಇದಕ್ಕೆ ಮುಗುಳ್ನಗುತ್ತ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, “ಅದು ಸಹ ಇರುತ್ತದೆ. ಅದು ಅತ್ಯಂತ ದೊಡ್ಡ ಶಕ್ತಿ. ನಾನು ಸಮಾಜದೊಂದಿಗೆ ಬೆರತು ಕೆಲಸ ಮಾಡುತ್ತಿರುವುದು ಈಗಾಗಲೇ 25 ವರ್ಷಗಳಾಗಿವೆ. ಜನರ ಆಶೀರ್ವಾದವೇ ನನ್ನನ್ನು ಸದಾ ಮಿಂಚುವಂತೆ ಮಾಡುತ್ತದೆ,” ಎಂದು ಹೇಳಿದರು.
ಈ ಹಾಸ್ಯಾಸ್ಪದ ಸಂವಾದದ ವೀಡಿಯೊ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ಹರ್ಲೀನ್ ಡಿಯೋಲ್ ಅವರ ಹಾಸ್ಯಭರಿತ ಧೈರ್ಯ ಮತ್ತು ಪ್ರಧಾನಿ ಮೋದಿ ಅವರ ಸೌಮ್ಯ ಪ್ರತಿಕ್ರಿಯೆಯನ್ನು ಮೆಚ್ಚಿಕೊಂಡಿದ್ದಾರೆ.
ವಿಶ್ವಕಪ್ ಗೆಲುವಿನ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಆಟಗಾರ್ತಿಯರೊಂದಿಗೆ ನಡೆದ ಈ ಭೇಟಿ, ಕ್ರೀಡೆ ಮತ್ತು ನಾಯಕತ್ವದ ಮಧ್ಯೆ ಮಾನವೀಯ ಸಂವಹನದ ಸೊಗಸಾದ ನೋಟವನ್ನೂ ನೀಡಿತು.