ಮುಂಬೈ, ನ. 06 (DaijiworldNews/TA): ಭಾರತದ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಇತ್ತೀಚಿನ ದಿನಗಳಲ್ಲಿ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದಾರೆ. ಏಷ್ಯಾಕಪ್ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದ ಬಳಿಕ, ಭಾರತ ಏಕದಿನ ತಂಡದಲ್ಲಿ ಪುನಃ ಸ್ಥಾನ ಪಡೆಯುವ ಕನಸಿಗಾಗಿ ಅವರು ಸೌತ್ ಆಫ್ರಿಕಾದ ಮಾಜಿ ದಿಗ್ಗಜ ಎಬಿ ಡಿವಿಲಿಯರ್ಸ್ ಅವರ ಸಹಾಯವನ್ನು ಕೋರಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಸೂರ್ಯಕುಮಾರ್ ಯಾದವ್, “ನನಗೆ ಎರಡೂ ಸ್ವರೂಪಗಳಲ್ಲಿ - ಟಿ20 ಮತ್ತು ಏಕದಿನ ಪಂದ್ಯ ಆಡಬೇಕೆಂಬ ಆಸೆಯಿದೆ. ಭಾರತ ಪರ ಟಿ20 ಕ್ರಿಕೆಟ್ ಆಡುತ್ತಿದ್ದರೂ ಏಕದಿನ ತಂಡದಲ್ಲಿ ನನ್ನ ಸ್ಥಾನ ಭದ್ರವಾಗಿಲ್ಲ. ಈ ಎರಡೂ ಸ್ವರೂಪಗಳನ್ನು ಹೇಗೆ ಕರಗತ ಮಾಡಿಕೊಳ್ಳಬಹುದು ಎಂಬುದರ ಕುರಿತು ಎಬಿ ಡಿವಿಲಿಯರ್ಸ್ ಅವರಿಂದ ಸಲಹೆ ಪಡೆಯಲು ಬಯಸುತ್ತಿದ್ದೇನೆ,” ಎಂದು ಹೇಳಿದ್ದಾರೆ. “ಟಿ20 ಶೈಲಿಯಂತೆಯೇ ಏಕದಿನ ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಲು ಪ್ರಯತ್ನಿಸುತ್ತಿದ್ದೆ, ಆದರೆ ಅದು ಸಫಲವಾಗಲಿಲ್ಲ. ನಾನು ಎಬಿಡಿ ಅವರನ್ನು ಭೇಟಿಯಾದರೆ ಅವರು ಹೇಗೆ ಈ ಎರಡೂ ಸ್ವರೂಪಗಳಲ್ಲಿ ಸಮತೋಲನ ಕಾಯ್ದುಕೊಂಡಿದ್ದರು ಎಂಬುದನ್ನು ಕೇಳಲು ಇಷ್ಟಪಡುತ್ತೇನೆ,” ಎಂದರು.
“ನನ್ನ ಈ ಮಾತುಗಳನ್ನು ಎಬಿ ಡಿವಿಲಿಯರ್ಸ್ ಕೇಳುತ್ತಿದ್ದರೆ ದಯವಿಟ್ಟು ಬೇಗ ನನ್ನನ್ನು ಸಂಪರ್ಕಿಸಿ. ನನ್ನ ಮುಂದಿನ ಮೂರು ಅಥವಾ ನಾಲ್ಕು ವರ್ಷಗಳು ಬಹಳ ಮಹತ್ವದವು. ನಾನು ಏಕದಿನ ಕ್ರಿಕೆಟ್ನಲ್ಲಿ ನನ್ನ ಛಾಪು ಮೂಡಿಸಲು ಬಯಸುತ್ತಿದ್ದೇನೆ. ದಯವಿಟ್ಟು ನನಗೆ ಸಹಾಯ ಮಾಡಿ,” ಎಂದು ಸೂರ್ಯಕುಮಾರ್ ಮನವಿ ಮಾಡಿದ್ದಾರೆ.