ಮುಂಬೈ, ನ. 02 (DaijiworldNews/TA): ನ್ಯೂಝಿಲೆಂಡ್ ಕ್ರಿಕೆಟ್ ತಂಡದ ಹಿರಿಯ ಬ್ಯಾಟರ್ ಹಾಗೂ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಮುಗಿದ ತಕ್ಷಣವೇ ವಿಲಿಯಮ್ಸನ್ ತಮ್ಮ ನಿವೃತ್ತಿ ನಿರ್ಧಾರವನ್ನು ಸಾರ್ವಜನಿಕವಾಗಿ ಪ್ರಕಟಿಸಿದರು.

ಇದರೊಂದಿಗೆ ಫೆಬ್ರವರಿಯಲ್ಲಿ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ನ್ಯೂಝಿಲೆಂಡ್ ಪರ ವಿಲಿಯಮ್ಸನ್ ಕಾಣಿಸಿಕೊಳ್ಳುವುದಿಲ್ಲ. ಆದರೆ ಅವರು ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ನಲ್ಲಿ ಮುಂದುವರಿಯುವುದಾಗಿ ತಿಳಿಸಿದ್ದಾರೆ.
“ಕಳೆದ 15 ವರ್ಷಗಳಿಂದ ನ್ಯೂಝಿಲೆಂಡ್ ಪರ ಕಣಕ್ಕಿಳಿಯುತ್ತಿದ್ದೇನೆ. ಈಗ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸುತ್ತೇನೆ. ಹೀಗಾಗಿ ಟಿ20 ಕ್ರಿಕೆಟ್ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇನೆ. ಆದರೆ ಟೆಸ್ಟ್ ಕ್ರಿಕೆಟ್ನಲ್ಲಿ ಇನ್ನೂ ಕೆಲವು ವರ್ಷಗಳ ಕಾಲ ಆಡಲು ಉತ್ಸುಕನಾಗಿದ್ದೇನೆ,” ಎಂದು ವಿಲಿಯಮ್ಸನ್ ಭಾವುಕವಾಗಿ ಹೇಳಿದ್ದಾರೆ.
ವಿಲಿಯಮ್ಸನ್ ಕೊನೆಯ ಬಾರಿಗೆ ನ್ಯೂಝಿಲೆಂಡ್ ಪರ ಟಿ20 ಪಂದ್ಯವಾಡಿದ್ದು 2024ರ ಟಿ20 ವಿಶ್ವಕಪ್ ಸಮಯದಲ್ಲಿ. ಆ ಬಳಿಕ ಗಾಯದಿಂದ ತಂಡದಿಂದ ಹೊರಗುಳಿದ ಅವರು ಇತ್ತೀಚೆಗೆ ಸಂಪೂರ್ಣ ಫಿಟ್ನೆಸ್ನೊಂದಿಗೆ ಮರಳಿದ್ದರು. ಆದರೆ ಈ ವೇಳೆ ಅಚ್ಚರಿಯ ನಿವೃತ್ತಿ ಘೋಷಣೆಯಿಂದ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
35 ವರ್ಷದ ವಯಸ್ಸಿನ ಕೇನ್ ವಿಲಿಯಮ್ಸನ್ ನ್ಯೂಝಿಲೆಂಡ್ ಪರ 93 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 90 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿ, 2575 ರನ್ಗಳನ್ನು ಬಾರಿಸಿದ್ದಾರೆ. ಈ ಅವಧಿಯಲ್ಲಿ ಅವರು 18 ಅರ್ಧಶತಕಗಳು, 58 ಸಿಕ್ಸ್ಗಳು ಹಾಗೂ 245 ಫೋರ್ಗಳನ್ನು ದಾಖಲಿಸಿದ್ದಾರೆ.