ನವದೆಹಲಿ, ನ. 02 (DaijiworldNews/AK): ಟೆನ್ನಿಸ್ ಲೋಕದಲ್ಲಿ ಮಿಂಚಿದ್ದ ಕನ್ನಡಿಗ ರೋಹನ್ ಬೋಪಣ್ಣ ತಮ್ಮ ಅದ್ಭುತ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ.

ಪ್ಯಾರಿಸ್ ಮಾಸ್ಟರ್ಸ್ 1000 ಟೂರ್ನಿಯಲ್ಲಿ ಅಲೆಕ್ಸಾಂಡರ್ ಬುಬ್ಲಿಕ್ ಅವರೊಂದಿಗೆ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದ ಬೋಪಣ್ಣ, ಇದೀಗ ವೃತ್ತಿಜೀವನಕ್ಕೆ ಅಂತ್ಯ ಹಾಡಿದ್ದಾರೆ. ರೋಹನ್ ಬೋಪಣ್ಣ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಮ್ಮ ನಿವೃತ್ತಿಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಬೋಪಣ್ಣ ಅತ್ಯಂತ ಹಿರಿಯ ಗ್ರ್ಯಾಂಡ್ ಸ್ಲ್ಯಾಮ್ ಡಬಲ್ಸ್ ವಿಜೇತ ಮತ್ತು ವಿಶ್ವದ ಅತ್ಯಂತ ಹಿರಿಯ ನಂಬರ್ 1 ಆಟಗಾರನಾಗುವ ಮೂಲಕ ಇತಿಹಾಸ ಕೂಡ ನಿರ್ಮಿಸಿದ್ದರು. ರೋಹನ್ ಬೋಪಣ್ಣ 2002ರಲ್ಲಿ ಡೇವಿಸ್ ಕಪ್ನಲ್ಲಿ ಭಾರತವನ್ನು ಪ್ರತಿನಿಧಿಸುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.
2003ರಲ್ಲಿ ವೃತ್ತಿಪರ ಆಟಗಾರರಾದರು ಮತ್ತು ಡಬಲ್ಸ್ನಲ್ಲಿ ಉತ್ತಮ ಆಟಗಾರರಲ್ಲಿ ಒಬ್ಬರಾಗಿದ್ದರು. 43ನೇ ವಯಸ್ಸಿನಲ್ಲಿಯೂ ಅವರು ಪಾದರಸದಂತೆ ಆಡುವ ರೀತಿ ಯುವ ಆಟಗಾರರಿಗೆ ಮಾದರಿಯಾಗಿತ್ತು.
ನಿಮ್ಮ ಜೀವನಕ್ಕೆ ಅರ್ಥ ನೀಡಿದ ವಿಷಯಕ್ಕೆ ನೀವು ಹೇಗೆ ವಿದಾಯ ಹೇಳುತ್ತೀರಿ? 20 ಮರೆಯಲಾಗದ ವರ್ಷಗಳ ಪ್ರವಾಸದ ನಂತರ, ಈಗ ಸಮಯ ಬಂದಿದೆ. ನಾನು ಅಧಿಕೃತವಾಗಿ ನನ್ನ ಟೆನ್ನಿಸ್ ರಾಕೆಟ್ ಅನ್ನು ನೇತುಹಾಕುತ್ತಿದ್ದೇನೆ. ಭಾರತವನ್ನು ಪ್ರತಿನಿಧಿಸುವುದು ನನ್ನ ಜೀವನದ ಅತ್ಯಂತ ದೊಡ್ಡ ಗೌರವವಾಗಿದೆ ಮತ್ತು ನಾನು ಪ್ರತಿ ಬಾರಿ ಕೋರ್ಟ್ಗೆ ಕಾಲಿಟ್ಟಾಗಲೂ ಆ ಧ್ವಜಕ್ಕಾಗಿ, ಆ ಭಾವನೆಗಾಗಿ ಮತ್ತು ಆ ಹೆಮ್ಮೆಗಾಗಿ ಆಡಿದ್ದೇನೆ. ಟೆನ್ನಿಸ್ ನನಗೆ ಕೇವಲ ಕ್ರೀಡೆಗಿಂತ ಹೆಚ್ಚಿನದಾಗಿದೆ.
ನಾನು ಸೋತಾಗ ಅದು ನನಗೆ ಉದ್ದೇಶವನ್ನು ಹಾಗೂ ಶಕ್ತಿ ನೀಡಿತು ಮತ್ತು ಜಗತ್ತು ನನ್ನನ್ನು ಅನುಮಾನಿಸಿದಾಗ ಆತ್ಮವಿಶ್ವಾಸವನ್ನು ನೀಡಿತು. ಪ್ರತಿ ಬಾರಿ ನಾನು ಕೋರ್ಟ್ಗೆ ಕಾಲಿಟ್ಟಾಗ ಪರಿಶ್ರಮ, ಮತ್ತೆ ಮೇಲೇರಲು ಸ್ಥಿತಿಸ್ಥಾಪಕತ್ವ ಮತ್ತು ಮತ್ತೆ ಹೋರಾಡಲು ಧೈರ್ಯವನ್ನು ಕಲಿಸಿತು ಎಂದರು.