ನವಿ ಮುಂಬೈ, ಅ. 31(DaijiworldNews/TA): ಜೆಮಿಮಾ ರೋಡ್ರಿಗಸ್ ಅವರ ಅಜೇಯ ಶತಕ ಹಾಗೂ ನಾಯಕಿ ಹರ್ಮನ್ಪ್ರೀತ್ ಕೌರ್ ಅವರ ಅದ್ಭುತ ಅರ್ಧಶತಕದ ನೆರವಿನಿಂದ ಭಾರತ ಮಹಿಳಾ ಕ್ರಿಕೆಟ್ ತಂಡವು 2025ರ ಮಹಿಳಾ ವಿಶ್ವಕಪ್ ಸೆಮಿಫೈನಲ್ನಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಸೋಲಿಸಿ ಫೈನಲ್ಗೆ ಅರ್ಹತೆ ಪಡೆದಿದೆ. ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಈ ರೋಚಕ ಪಂದ್ಯದಲ್ಲಿ ಭಾರತ 339 ರನ್ಗಳ ಭರ್ಜರಿ ಗುರಿಯನ್ನು 48.3 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಬೆನ್ನಟ್ಟಿ ಗೆಲುವು ಸಾಧಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 49.5 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 338 ರನ್ ಕಲೆಹಾಕಿತು. ಆರಂಭಿಕ ಆಟಗಾರ್ತಿ ಲಿಚ್ಫೀಲ್ಡ್ ಶತಕ (119) ಬಾರಿಸಿ ತಂಡಕ್ಕೆ ಬಲಿಷ್ಠ ಆರಂಭ ನೀಡಿದರು. ಅವರ ಜೊತೆಗೆ ಎಲಿಸ್ ಪೆರ್ರಿ 77 ರನ್ ಗಳಿಸಿ ಎರಡನೇ ವಿಕೆಟ್ಗೆ 155 ರನ್ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಆಶ್ಲೇ ಗಾರ್ಡ್ನರ್ 63 ರನ್ ಗಳಿಸಿ ತಂಡವನ್ನು 300 ರನ್ ಗಡಿ ದಾಟಿಸಿದರು.
ದೊಡ್ಡ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಇಬ್ಬರು ಓಪನರ್ಗಳು ತ್ವರಿತವಾಗಿ ಪೆವಿಲಿಯನ್ ಸೇರಿಕೊಂಡರು. ಆದಾಗ್ಯೂ, ಮೂರನೇ ವಿಕೆಟ್ಗೆ ಜೆಮಿಮಾ ರೋಡ್ರಿಗಸ್ ಮತ್ತು ಹರ್ಮನ್ಪ್ರೀತ್ ಕೌರ್ ಅದ್ಭುತ ಪಾಲುದಾರಿಕೆಯನ್ನು ನಿರ್ಮಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಇವರಿಬ್ಬರು 167 ರನ್ಗಳ ಕಟ್ಟಿದರು. ಜೆಮಿಮಾ 134 ಎಸೆತಗಳಲ್ಲಿ 14 ಬೌಂಡರಿಗಳ ಸಹಾಯದಿಂದ ಅಜೇಯ 127 ರನ್ಗಳಿಸಿದರೆ, ನಾಯಕಿ ಹರ್ಮನ್ಪ್ರೀತ್ ಕೌರ್ 88 ಎಸೆತಗಳಲ್ಲಿ 10 ಬೌಂಡರಿ ಮತ್ತು 2 ಸಿಕ್ಸರ್ಗಳ ನೆರವಿನಿಂದ 89 ರನ್ಗಳಿಸಿದರು.
ಆಸ್ಟ್ರೇಲಿಯಾ ಪರ ಕಿಮ್ ಗಾರ್ತ್ ಮತ್ತು ಅನ್ನಾಬೆಲ್ ಸದರ್ಲ್ಯಾಂಡ್ ತಲಾ ಎರಡು ವಿಕೆಟ್ ಪಡೆದರೂ, ಜೆಮಿಮಾ ಮತ್ತು ಹರ್ಮನ್ಪ್ರೀತ್ ಅವರ ಅದ್ಭುತ ಪ್ರದರ್ಶನದ ಮುಂದೆ ಆಸೀಸ್ ಬೌಲರ್ಗಳು ನಿಷ್ಫಲರಾದರು. ಈ ಗೆಲುವಿನಿಂದ ಭಾರತವು ಗುಂಪು ಹಂತದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಂಡಿದೆ.
ಈ ಮೂಲಕ ಭಾರತ ಮಹಿಳಾ ತಂಡವು ವಿಶ್ವಕಪ್ ಫೈನಲ್ಗೆ ಮೂರನೇ ಬಾರಿ ಪ್ರವೇಶಿಸಿದೆ. 2005 ಮತ್ತು 2017ರ ನಂತರ ಇದೀಗ 2025ರಲ್ಲಿ ಫೈನಲ್ಗೆ ಪ್ರವೇಶಿಸಿದೆ. ಭಾರತ ಇನ್ನೂ ವಿಶ್ವಕಪ್ ಗೆದ್ದಿಲ್ಲವಾದ್ದರಿಂದ, ಈ ಬಾರಿ ಟೀಂ ಇಂಡಿಯಾ ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧ ಟ್ರೋಫಿಗಾಗಿ ಕಾದಾಡಲಿದೆ.