ಮುಂಬೈ, ಅ. 30(DaijiworldNews/TA): ಬರೋಬ್ಬರಿ 18 ವರ್ಷಗಳ ಬಳಿಕ ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಐಸಿಸಿ ಏಕದಿನ ಕ್ರಿಕೆಟ್ (ODI) ಬ್ಯಾಟ್ಸ್ಮನ್ಗಳ ನೂತನ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ್ದಾರೆ. ಇದರಿಂದ ಅವರು ಕೇವಲ ಶ್ರೇಷ್ಠ ಬ್ಯಾಟರ್ ಆಗಿ ಗುರುತಿಸಿಕೊಂಡಷ್ಟೇ ಅಲ್ಲದೆ, ಕ್ರಿಕೆಟ್ ಇತಿಹಾಸದಲ್ಲೇ ವಿಶಿಷ್ಟ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಐಸಿಸಿ ಪ್ರಕಟಿಸಿರುವ ಹೊಸ ರ್ಯಾಂಕಿಂಗ್ ಪಟ್ಟಿಯಲ್ಲಿ ರೋಹಿತ್ ಶರ್ಮಾ ಟಾಪ್ ಸ್ಥಾನ ಪಡೆದಿದ್ದಾರೆ. ಈ ಮೂಲಕ ಅವರು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ನಂ.1 ಸ್ಥಾನಕ್ಕೇರಿದ ಅತ್ಯಂತ ಹಿರಿಯ ಬ್ಯಾಟರ್ ಎಂಬ ವಿಶ್ವ ದಾಖಲೆ ಸ್ಥಾಪಿಸಿದ್ದಾರೆ. ಇದಕ್ಕೂ ಮೊದಲು ಈ ದಾಖಲೆಯು ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿತ್ತು. 2011ರಲ್ಲಿ ಐಸಿಸಿ ಒಡಿಐ ಬ್ಯಾಟರ್ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದಾಗ ಸಚಿನ್ ಅವರ ವಯಸ್ಸು 38 ವರ್ಷ 73 ದಿನಗಳು. ಅಂದು ಅವರು ಐಸಿಸಿ ರ್ಯಾಂಕಿಂಗ್ನ ಟಾಪ್ ಸ್ಥಾನ ಪಡೆದ ಅತ್ಯಂತ ಹಿರಿಯ ಬ್ಯಾಟರ್ ಆಗಿದ್ದರು. ಆದರೆ ಇದೀಗ, ರೋಹಿತ್ ಶರ್ಮಾ 38 ವರ್ಷ 182 ದಿನಗಳ ವಯಸ್ಸಿನಲ್ಲಿ ಈ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಂದರೆ ಸಚಿನ್ಗಿಂತ 109 ದಿನ ಹಿರಿಯನಾಗಿ, ರೋಹಿತ್ ಐಸಿಸಿ ಒಡಿಐ ಬ್ಯಾಟರ್ಗಳ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.
ಈ ಸಾಧನೆಯಿಂದ ರೋಹಿತ್ ಶರ್ಮಾ ಕೇವಲ ಭಾರತದಷ್ಟೇ ಅಲ್ಲ, ವಿಶ್ವ ಕ್ರಿಕೆಟ್ ಇತಿಹಾಸದಲ್ಲಿಯೂ ಅತ್ಯಂತ ಹಿರಿಯ ವಯಸ್ಸಿನಲ್ಲಿ ನಂ.1 ಸ್ಥಾನಕ್ಕೇರಿದ ಬ್ಯಾಟರ್ ಎಂಬ ಗೌರವ ಪಡೆದಿದ್ದಾರೆ. ಅಭಿಮಾನಿಗಳಿಂದ ಹಿಟ್ಮ್ಯಾನ್ಗಾಗಿ ಅಭಿನಂದನೆಗಳ ಸುರಿಮಳೆ ಹರಿಯುತ್ತಿದೆ. ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿದು ಹೊಸ ಇತಿಹಾಸ ಬರೆದಿರುವ ರೋಹಿತ್ ಶರ್ಮಾ ಈಗ ಮತ್ತೊಮ್ಮೆ ಭಾರತೀಯ ಕ್ರಿಕೆಟ್ನ ಹೆಮ್ಮೆಯ ಕ್ಷಣವನ್ನು ಸೃಷ್ಟಿಸಿದ್ದಾರೆ.