ಲಂಡನ್, ಅ. 16 (DaijiworldNews/AK):2030ರ ಕಾಮನ್ವೆಲ್ತ್ ಗೇಮ್ಸ್ ಗುಜರಾತಿನ ಅಹಮದಾಬಾದ್ನಲ್ಲಿ ನಡೆಯಲಿದೆ. 2030ರ ಶತಮಾನೋತ್ಸವದ ಕಾಮನ್ವೆಲ್ತ್ ಕ್ರೀಡಾಕೂಟ ಆಯೋಜನೆ ಮಾಡಲು ಕಾಮನ್ವೆಲ್ತ್ ಗೇಮ್ಸ್ನ ಕಾರ್ಯನಿರ್ವಾಹಕ ಮಂಡಳಿ ಅಹಮದಾಬಾದ್ ನಗರವನ್ನು ಶಿಫಾರಸು ಮಾಡಿದೆ.

2030 ರ ಗೇಮ್ಸ್ ಆಯೋಜನೆಗೆ ನೈಜೀರಿಯಾ ತನ್ನ ರಾಜಧಾನಿ ಅಬುಜಾ ನಗರವನ್ನು ಬಿಡ್ಗೆ ಕಳುಹಿಸಿತ್ತು. ಆದರೆ ಅಬುಜಾ ನಗರದಲ್ಲಿ 2034ರ ಗೇಮ್ಸ್ ನಡೆಯುವ ಸಾಧ್ಯತೆಯಿದೆ. ಕುರಿತು ಅಂತಿಮ ನಿರ್ಧಾರವು ನವೆಂಬರ್ 26 ರಂದು ಗ್ಲಾಸ್ಗೋದಲ್ಲಿ ನಡೆಯಲಿರುವ ಕಾಮನ್ವೆಲ್ತ್ ಕ್ರೀಡಾಕೂಟದ ಮಹಾಸಭೆಯಲ್ಲಿ ಪ್ರಕಟವಾಗಲಿದೆ.
ಕಾಮನ್ವೆಲ್ತ್ ಗೇಮ್ಸ್ನ ಮಧ್ಯಂತರ ಅಧ್ಯಕ್ಷರಾದ ಡಾ. ಡೊನಾಲ್ಡ್ ರುಕರೆ ಮಾತನಾಡಿ, 2030 ರ ಕಾಮನ್ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸಲು ಭಾರತ ಮತ್ತು ನೈಜೀರಿಯಾಗಳು ತೋರಿದ ಪ್ರಸ್ತಾಪಕ್ಕೆ ನಾವು ಕೃತಜ್ಞರಾಗಿದ್ದೇವೆ. ಎರಡೂ ನಗರಗಳ ಪ್ರಸ್ತಾಪಗಳು ಸ್ಪೂರ್ತಿದಾಯಕವಾಗಿದ್ದವು. ನಮ್ಮ ಶತಮಾನೋತ್ಸವ ಕ್ರೀಡಾಕೂಟವನ್ನು ನಾವು ಎದುರು ನೋಡುತ್ತಿದ್ದು, ಗ್ಲ್ಯಾಸ್ಗೋದಲ್ಲಿ ನಡೆಯುವ ಸಾಮಾನ್ಯ ಸಭೆಯಲ್ಲಿ ನಮ್ಮ ಸದಸ್ಯರು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
2010 ರಲ್ಲಿ ಭಾರತ ದೆಹಲಿಯಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟವನ್ನು ಆಯೋಜನೆ ಮಾಡಿತ್ತು. 2036 ರ ಒಲಿಂಪಿಕ್ಸ್ ಆಯೋಜನೆಗೆ ಭಾರತ ಈಗಾಗಲೇ ಬಿಡ್ ಸಲ್ಲಿಸಿದೆ.