ಮುಂಬೈ, ಅ. 15 (DaijiworldNews/AK): 2025 ರ ರಣಜಿ ಟ್ರೋಫಿ ಇಂದಿನಿಂದ ಆರಂಭವಾಗಿದ್ದು, ಈ ಟೂರ್ನಿಯಲ್ಲಿ ಎಲ್ಲರ ಕಣ್ಣುಗಳು 14 ವರ್ಷದ ವೈಭವ್ ಸೂರ್ಯವಂಶಿ ಮೇಲೆ ಇದ್ದವು. ಯಾಕೆಂದರೆ ಅಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಪ್ರವಾಸದಲ್ಲಿ ರನ್ಗಳ ಮಳೆ ಹರಿಸಿದ್ದ ವೈಭವ್ಗೆ ಬಿಹಾರ ತಂಡದ ಉಪನಾಯಕತ್ವ ನೀಡುವುದರ ಜೊತೆಗೆ ರಣಜಿ ತಂಡದಲ್ಲೂ ಸ್ಥಾನ ನೀಡಲಾಗಿತ್ತು.

ಹೀಗಾಗಿ ಉಪನಾಯಕನಾಗಿ ವೈಭವ್ ಆಟವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಅರುಣಾಚಲ ಪ್ರದೇಶ ವಿರುದ್ಧದ ಮೊದಲ ಪಂದ್ಯದಲ್ಲಿ ವೈಭವ್ ಮುಗ್ಗರಿಸಿದ್ದಾರೆ. ಆರಂಭಿಕನಾಗಿ ಕಣಕ್ಕಿಳಿದಿದ್ದ ವೈಭವ್ ಕೇವಲ 5 ಎಸೆತಗಳನ್ನು ಎದುರಿಸಿ ಪೆವಿಲಿಯನ್ ಸೇರಿಕೊಂಡರು.
ಈ ಪಂದ್ಯದಲ್ಲಿ ಬಿಹಾರ ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ ಅದ್ಭುತವಾಗಿ ಪ್ರಾರಂಭಿಸಿದರು. ಮೊದಲ ನಾಲ್ಕು ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ವೈಭವ್ 14 ರನ್ ಕಲೆಹಾಕಿದರು. ಆದರೆ ತಾಳ್ಮೆಯನ್ನೇ ಕೇಳುವ ರಣಜಿ ಪಂದ್ಯಾವಳಿಯಲ್ಲಿ ಟಿ20 ಕ್ರಿಕೆಟ್ ಆಡಲು ಯತ್ನಿಸಿದ ವೈಭವ್ 5ನೇ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.