ಮುಂಬೈ, ಅ. 14(DaijiworldNews/TA): ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದು, ಒಂದೇ ತಂಡದ ವಿರುದ್ಧ ಸತತ 10 ಸರಣಿಗಳನ್ನು ಗೆದ್ದ ರಾಷ್ಟ್ರ ಎಂಬ ದಾಖಲೆ ನಿರ್ವಹಿಸುವ ಮೂಲಕ ಸೌತ್ ಆಫ್ರಿಕಾದ ವಿಶ್ವ ದಾಖಲೆಯನ್ನು ಸರಿಗಟ್ಟಿದೆ. 2002ರಲ್ಲಿ ಆರಂಭವಾದ ಈ ಗೆಲುವಿನ ನಾಗಾಲೋಟವು ಈಗ 2025ರಲ್ಲಿ ಸಂಪೂರ್ಣ 10 ಸರಣಿಗಳ ಗೆಲುವಿಗೆ ತಲುಪಿದ್ದು, ಅದು ಟೆಸ್ಟ್ ಕ್ರಿಕೆಟ್ನಲ್ಲಿ ದಾಖಲೆಯ ಸಂಗತಿಯಾಗಿದೆ.

ಇತ್ತೀಚೆಗೆ ಮುಗಿದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತವು ವೆಸ್ಟ್ ಇಂಡೀಸ್ ವಿರುದ್ಧ ಇನಿಂಗ್ಸ್ ಹಾಗೂ 140 ರನ್ಗಳ ಭರ್ಜರಿ ಜಯವನ್ನೂ, ನಂತರದ ಪಂದ್ಯದಲ್ಲಿ 7 ವಿಕೆಟ್ಗಳ ಗೆಲುವನ್ನೂ ದಾಖಲಿಸಿದೆ. ಈ ಮೂಲಕ ಸರಣಿಯನ್ನು 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದೆ. ಇದರಿಂದ ಭಾರತ ತಂಡವು ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ತನ್ನ ಪ್ರಾಬಲ್ಯವನ್ನು ಸಾಬೀತುಪಡಿಸಿದೆ.
ಇದು ಕೇವಲ ಗೆಲುವಿನಷ್ಟೇ ಅಲ್ಲ, ದಾಖಲೆ ನಿರ್ಮಾಣವೂ ಹೌದು. ಹಿಂದೆ ಈ ದಾಖಲೆ ಸೌತ್ ಆಫ್ರಿಕಾ ತಂಡದ ಹೆಸರಿನಲ್ಲಿ ಇತ್ತು. ಅವರು ಜಿಂಬಾಬ್ವೆ ವಿರುದ್ಧ ಸತತ 10 ಟೆಸ್ಟ್ ಸರಣಿಗಳನ್ನು ಗೆದ್ದಿದ್ದರು. ಈಗ ಭಾರತವೂ ವೆಸ್ಟ್ ಇಂಡೀಸ್ ವಿರುದ್ಧ ಇದೇ ಸಾಧನೆಗೇರಿದೆ. ವಿಶೇಷವೆಂದರೆ, 2013ರಿಂದ ವೆಸ್ಟ್ ಇಂಡೀಸ್ ತಂಡವು ಭಾರತದಲ್ಲಿ ಒಂದು ಟೆಸ್ಟ್ ಪಂದ್ಯವನ್ನೂ ಗೆದ್ದಿಲ್ಲ.
ಭಾರತದ ಈ ಸಾಧನೆಯ ಹಿಂದೆ ಯುವ ಆಟಗಾರರ ಪರ್ಫಾರ್ಮೆನ್ಸ್, ಉತ್ತಮ ತಂಡ ಆಯ್ಕೆ ಮತ್ತು ಸ್ಟ್ರಾಟೆಜಿಕ್ ನಾಯಕತ್ವ ಮುಖ್ಯ ಪಾತ್ರ ವಹಿಸಿದ್ದು, ಮುಂಬರುವ ಟೆಸ್ಟ್ ಚಾಂಪಿಯನ್ಶಿಪ್ ಹಂತಗಳತ್ತ ಭಾರತವು ಭರವಸೆಯೊಂದಿಗೆ ಸಾಗುತ್ತಿದೆ.