ಕೊಲಂಬೊ, ಅ. 12(DaijiworldNews/TA): ಮಹಿಳಾ ಏಕದಿನ ವಿಶ್ವಕಪ್ನ 12ನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ತಾರೆ ಬ್ಯಾಟರ್ ನ್ಯಾಟ್ ಸೀವರ್ ಬ್ರಂಟ್ ಇತಿಹಾಸ ಸೃಷ್ಟಿಸಿದ್ದಾರೆ. ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಅವರು 117 ಎಸೆತಗಳಲ್ಲಿ 117 ರನ್ಗಳ ಭರ್ಜರಿ ಶತಕ ಬಾರಿಸಿದ್ದು, ಮಹಿಳಾ ವಿಶ್ವಕಪ್ ಇತಿಹಾಸದಲ್ಲಿ ಅತ್ಯಧಿಕ ಶತಕಗಳು ಸಿಡಿಸಿದ ಆಟಗಾರ್ತಿ ಎಂಬ ವಿಶ್ವ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ.

ಈ ಪಂದ್ಯವು ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದಿದ್ದು, ಟಾಸ್ ಗೆದ್ದ ಶ್ರೀಲಂಕಾ ಬೌಲಿಂಗ್ ಆಯ್ದುಕೊಂಡಿತು. ಇಂಗ್ಲೆಂಡ್ ಆರಂಭಿಕರು ವೇಗವಾಗಿ ಔಟ್ ಆದ ಸಂದರ್ಭ, ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಸೀವರ್ ಬ್ರಂಟ್ ಆರಂಭದಲ್ಲಿ ಎಚ್ಚರಿಕೆಯಿಂದ ಆಟ ಮುಂದುವರೆಸಿದರು. ಆದರೆ ಕೆಲ ಓವರ್ಗಳ ಬಳಿಕ ತಮ್ಮ ಬ್ಯಾಟಿಂಗ್ ಶೈಲಿಗೆ ಗುರುತಾಗಿರುವ ಬಿರುಸು ಹೊಡೆತಗಳನ್ನು ಪ್ರಾರಂಭಿಸಿದರು.
ಅವರು 117 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್ ಗಳೊಂದಿಗೆ 117 ರನ್ ಗಳಿಸಿದರು. ಈ ಶತಕ ಅವರ ವಿಶ್ವಕಪ್ ಶತಕಗಳ ಸಂಖ್ಯೆ 5ಕ್ಕೆ ತಲುಪಿಸಿದ್ದು, ಈ ಮೂಲಕ ಇತಿಹಾಸದಲ್ಲೇ ವಿಶ್ವಕಪ್ನಲ್ಲಿ ಅತ್ಯಧಿಕ ಶತಕ ಗಳಿಸಿದ ಆಟಗಾರ್ತಿ ಎಂಬ ಸಾಧನೆ ಮಾಡಿದರು. ಇದಕ್ಕೂ ಮೊದಲು ಈ ದಾಖಲೆ ನ್ಯೂಝಿಲೆಂಡ್ನ ಸುಝಿ ಬೆಟ್ಸ್ ಅವರ ಹೆಸರಿನಲ್ಲಿ ಇತ್ತು, ಅವರು 29 ಇನಿಂಗ್ಸ್ಗಳಲ್ಲಿ ನಾಲ್ಕು ಶತಕಗಳನ್ನು ಗಳಿಸಿದ್ದರು.
ನ್ಯಾಟ್ ಸೀವರ್ ಬ್ರಂಟ್ ಈವರೆಗೆ ಮಹಿಳಾ ವಿಶ್ವಕಪ್ನಲ್ಲಿ ಕೇವಲ 19 ಇನಿಂಗ್ಸ್ಗಳಲ್ಲಿ ಐದು ಶತಕಗಳ ಅಪರೂಪದ ಸಾಧನೆ ಮಾಡಿದ್ದಾರೆ. ಅವರ ಈ ಸಾಧನೆಯು ಕ್ರೀಡಾ ಪ್ರಪಂಚದ ಇಂಗ್ಲೆಂಡ್ ಅಭಿಮಾನಿಗಳಲ್ಲಿಯೂ ಹರ್ಷದ ಅಲೆ ಎಬ್ಬಿಸಿದೆ. ಇಡೀ ಪಂದ್ಯದಲ್ಲಿ ಬ್ರಂಟ್ ಅವರ ಆಟ ತೀವ್ರವಾಗಿ ಹಾವಳಿ ಮೆರೆಯುತ್ತಿದ್ದು, ಇಂಗ್ಲೆಂಡ್ಗೆ ಉತ್ತಮ ಮೊತ್ತ ಕಟ್ಟಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದೆ. ಇದೀಗ ಅವರು ಮಹಿಳಾ ಕ್ರಿಕೆಟ್ನ ಇತಿಹಾಸದಲ್ಲಿ ಹೊಸ ಮೆಟ್ಟಿಲು ಏರಿದ್ದಾರೆಂದು ನಿಶ್ಚಿತವಾಗಿ ಹೇಳಬಹುದು.