ಮುಂಬೈ, ಅ. 11 (DaijiworldNews/AA): ಸೌತ್ ಆಫ್ರಿಕಾ ತಂಡದ ಮಾಜಿ ನಾಯಕ ಗ್ರೇಮ್ ಸ್ಮಿತ್ ಅವರು 23ನೇ ವಯಸ್ಸಿನಲ್ಲಿ ಬರೆದ ವರ್ಲ್ಡ್ ರೆಕಾರ್ಡ್ ಅನ್ನು ಮುರಿದು, ಭಾರತ ತಂಡದ ಯಂಗ್ ಬ್ಯಾಟರ್ ಯಶಸ್ವಿ ಜೈಸ್ವಾಲ್ ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ಬರೆದಿದ್ದಾರೆ.

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಯಶಸ್ವಿ ಜೈಸ್ವಾಲ್ 253 ಎಸೆತಗಳಲ್ಲಿ 173 ರನ್ ಗಳಿಸಿದ್ದರು. ಈ ಉತ್ತಮ ಪ್ರದರ್ಶನದೊಂದಿಗೆ ಜೈಸ್ವಾಲ್ ವಿಶೇಷ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 23 ವರ್ಷದೊಳಗೆ ಅತೀ ಹೆಚ್ಚು ಟೆಸ್ಟ್ ಶತಕ ಸಿಡಿಸಿದ ಆರಂಭಿಕ ದಾಂಡಿಗ ಎಂಬ ವಿಶ್ವ ದಾಖಲೆ ಯಶಸ್ವಿ ಜೈಸ್ವಾಲ್ ಅವರ ಪಾಲಾಗಿದೆ. ಇದಕ್ಕೂ ಮುನ್ನ ಈ ವಿಶ್ವ ದಾಖಲೆ ಸೌತ್ ಆಫ್ರಿಕಾದ ಗ್ರೇಮ್ ಸ್ಮಿತ್ ಹೆಸರಿನಲ್ಲಿತ್ತು.
ಗ್ರೇಮ್ ಸ್ಮಿತ್ ಟೆಸ್ಟ್ ಕ್ರಿಕೆಟ್ನಲ್ಲಿ ತಮ್ಮ 23ನೇ ವಯಸ್ಸಿನೊಳಗೆ ಆರಂಭಿಕನಾಗಿ ಕಣಕ್ಕಿಳಿದು 7 ಶತಕ ಸಿಡಿಸಿದ್ದರು. ಈ ಏಳು ಶತಕ ಬಾರಿಸಲು ಬರೋಬ್ಬರಿ 50 ಇನಿಂಗ್ಸ್ ಗಳನ್ನು ತೆಗೆದುಕೊಂಡಿದ್ದರು. ಇದೀಗ ಯಶಸ್ವಿ ಜೈಸ್ವಾಲ್ ಕೇವಲ 48 ಇನಿಂಗ್ಸ್ ಗಳಲ್ಲಿ 7 ಟೆಸ್ಟ್ ಶತಕ ಬಾರಿಸಿದ್ದಾರೆ. ಈ ಮೂಲಕ ಟೆಸ್ಟ್ ಇತಿಹಾಸದಲ್ಲೇ ಆರಂಭಿಕನಾಗಿ ಕಣಕ್ಕಿಳಿದು ಅತೀ ಕಡಿಮೆ ಇನಿಂಗ್ಸ್ ಗಳಲ್ಲಿ 7 ಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಜೈಸ್ವಾಲ್ ಪಾತ್ರರಾಗಿದ್ದಾರೆ.