ನವದೆಹಲಿ, ಅ. 10 (DaijiworldNews/TA): ಫೆಬ್ರವರಿ 14, 2019 ರಂದು ನಡೆದ ಭೀಕರ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಶಹೀದ್ ವಿಜಯ್ ಸೊರೆಂಗ್ ಅವರ ಪುತ್ರ ರಾಹುಲ್ ಸೊರೆಂಗ್ ಕ್ರಿಕೆಟ್ ಲೋಕದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಹರಿಯಾಣದ ಅಂಡರ್-19 ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ರಾಹುಲ್ ಸೊರೆಂಗ್, ಕಿರಿಯ ವಯಸ್ಸಿನಲ್ಲೇ ಮಹತ್ವದ ಸಾಧನೆ ಮಾಡಿ, ನಾಡಿಗೆ ಗೌರವ ತಂದಿದ್ದಾರೆ.

ಪ್ರಸ್ತುತ ಹತ್ತನೇ ತರಗತಿ ಓದುತ್ತಿರುವ ರಾಹುಲ್, ಪುದುಚೇರಿಯಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಹರಿಯಾಣ ತಂಡವನ್ನು ಪ್ರತಿನಿಧಿಸಲಿದ್ದಾರೆ. ತಮ್ಮ ತಂದೆಯ ಹುತಾತ್ಮರಾದ ನಂತರ, ಗುರುಗ್ರಾಮ್ನ ಸೆಹ್ವಾಗ್ ಅಂತರರಾಷ್ಟ್ರೀಯ ಶಾಲೆಯಲ್ಲಿ ಉಚಿತ ಶಿಕ್ಷಣ ಪಡೆಯುತ್ತಿರುವ ರಾಹುಲ್, ತಮ್ಮ ಕನಸುಗಳನ್ನು ಸಕಾರಗೊಳಿಸಲು ನಿರಂತರ ಪರಿಶ್ರಮದಿಂದ ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದಾರೆ. ಅವರ ಪ್ರತಿಭೆ ಮತ್ತು ಶ್ರಮವನ್ನು ಗುರುತಿಸಿ, ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಅಭಿನಂದನೆಗಳ ಸುರಿಮಳೆಯನ್ನೇ ಹರಿಸಿದ್ದಾರೆ.
"ಪುಲ್ವಾಮಾ ದಾಳಿಯಲ್ಲಿ ತಂದೆ ಹುತಾತ್ಮರಾದ ಬಳಿಕ ರಾಹುಲ್ಗೆ ಬೆಂಬಲ ನೀಡುವುದು ನನ್ನ ಕರ್ತವ್ಯವೆಂದು ನಾನು ಭಾವಿಸಿದ್ದೆ. ಅವರು ಇಂದು ಒಂದು ಮಹತ್ವದ ಹಂತ ತಲುಪಿರುವುದು ನನಗೆ ಹೆಮ್ಮೆ ಮತ್ತು ಸಂತೋಷ ನೀಡುತ್ತದೆ," ಎಂದು ಸೆಹ್ವಾಗ್ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.
ರಾಹುಲ್ ಸೊರೆಂಗ್ ಈಗಾಗಲೇ ಹರಿಯಾಣದ ಅಂಡರ್-14 ಮತ್ತು ಅಂಡರ್-16 ತಂಡಗಳಲ್ಲಿ ಯಶಸ್ವಿಯಾಗಿ ತೊಡಗಿಸಿಕೊಂಡಿದ್ದರು. ಇದೀಗ ಅಂಡರ್-19 ಮಟ್ಟದ ಸಾಧನೆಯೊಂದಿಗೆ, ಅವರು ತಮ್ಮ ಮುಂದಿನ ಗುರಿ – ಭಾರತೀಯ ಅಂಡರ್-19 ತಂಡದ ಕನಸಿನತ್ತ ಭರವಸೆಯ ಹೆಜ್ಜೆ ಹಾಕಿದ್ದಾರೆ.
ರಾಹುಲ್ರ ಈ ಸಾಧನೆ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಎಲ್ಲಾ ಯೋಧರ ಮಕ್ಕಳಿಗೆ ಪ್ರೇರಣೆಯಾಗುತ್ತಿದ್ದು, ತ್ಯಾಗದ ಬಿತ್ತನೆ ಮಾಡಿರುವ ಕುಟುಂಬಗಳಿಂದ ಹುಟ್ಟುವ ಗಿಡಗಳು ರಾಷ್ಟ್ರಕ್ಕೆ ಶ್ರೇಷ್ಠ ಫಲ ನೀಡಬಲ್ಲವೆಂಬುದಕ್ಕೆ ಈತ ಒಂದು ಸ್ಪಷ್ಟ ಉದಾಹರಣೆ.