ಕೊಲಂಬೊ, ಅ. 09(DaijiworldNews/ TA): ಆಸ್ಟ್ರೇಲಿಯಾದ ಸ್ಪಿನ್ನರ್ ಅಲನಾ ಕಿಂಗ್ ಮಹಿಳಾ ಏಕದಿನ ಕ್ರಿಕೆಟ್ನಲ್ಲಿ ಒಂದು ಅಪರೂಪದ ಮತ್ತು ಐತಿಹಾಸಿಕ ದಾಖಲೆ ಮಾಡಿದ್ದಾರೆ. ಪಾಕಿಸ್ತಾನ್ ವಿರುದ್ಧ ನಡೆದ ವಿಶ್ವಕಪ್ ಪಂದ್ಯದಲ್ಲಿ ಕೇವಲ ಸ್ಪಿನ್ ಬೌಲಿಂಗ್ನಲ್ಲಿಯೇ ಅಲ್ಲ, ದಿಗ್ಗಜ ಬ್ಯಾಟಿಂಗ್ ಪ್ರದರ್ಶನದ ಮೂಲಕವೂ ಕಿಂಗ್ ಸುದ್ದಿಯಲ್ಲಿದ್ದಾರೆ. ವಿಶೇಷವೆಂದರೆ, ಅವರು 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದು ಅರ್ಧಶತಕ ಬಾರಿಸಿರುವ ಮೊದಲ ಮಹಿಳಾ ಆಟಗಾರರಾಗಿದ್ದಾರೆ.

ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್ನ 9ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲಿಗೆ ಬ್ಯಾಟಿಂಗ್ ನಡೆಸಿ ಕೇವಲ 115 ರನ್ಗಳಿಗೆ 8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಸಂದರ್ಭದಲ್ಲಿ ಕ್ರೀಸ್ಗೆ ಬಂದ ಅಲನಾ ಕಿಂಗ್, ಅನುಭವಿ ಬ್ಯಾಟರ್ ಬೆತ್ ಮೂನಿ ಅವರ ಜೊತೆಗೆ ಇನ್ನಿಂಗ್ಸ್ ಆಡಿದರು.
ಅಲನಾ ಕಿಂಗ್ ಅವರು ಕೇವಲ 48 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದು, ಅವರು ಅಜೇಯ 51 ರನ್ಗಳನ್ನು ಬಾರಿಸಿದ್ದು, ಈ ಮೂಲಕ ಮಹಿಳಾ ಒಡಿಐ ಕ್ರಿಕೆಟ್ನಲ್ಲಿ 10ನೇ ಕ್ರಮಾಂಕದಲ್ಲಿ ಅರ್ಧಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ಖ್ಯಾತಿಯನ್ನು ಪಡೆದಿದ್ದಾರೆ.
ಇದರವರೆಗೆ ಈ ದಾಖಲೆ ದಕ್ಷಿಣ ಆಫ್ರಿಕಾದ ಯುಲಾಂಡಿ ವ್ಯಾನ್ ಡರ್ ಮರ್ವ್ ಹೆಸರಿನಲ್ಲಿ ಇತ್ತು. 2000ರಲ್ಲಿ ಭಾರತದ ವಿರುದ್ಧ ನಡೆದ ಪಂದ್ಯದಲ್ಲಿ ಅವರು 10ನೇ ಕ್ರಮಾಂಕದಲ್ಲಿ ಇಳಿದು 42 ರನ್ ಗಳಿಸಿದ್ದರು. ಆದರೆ ಈಗ ಅಲನಾ ಕಿಂಗ್ ಅವರು ಈ ದಾಖಲೆಯನ್ನು ಮುರಿದು ಹೊಸ ಇತಿಹಾಸ ಬರೆದಿದ್ದಾರೆ.
ಅಲನಾ ಕಿಂಗ್ ಅವರ ಈ ಸಾಧನೆ ಮಹಿಳಾ ಕ್ರಿಕೆಟ್ನ ಇತಿಹಾಸದಲ್ಲಿ ಒಂದು ಮಹತ್ವದ ಸಮಯ ಎಂದು ಪರಿಗಣಿಸಲಾಗಿದೆ. ಈ ದಾಖಲೆ ಅವರು ಬೌಲರ್ ಆಗಿ ಇಂತಹ ಪ್ರದರ್ಶನ ನೀಡಿರುವುದು ಮತ್ತಷ್ಟು ವಿಶೇಷವಾಗಿದೆ.