ನವದೆಹಲಿ, ಅ. 03 (DaijiworldNews/TA): 2025ರ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಯಶಸ್ವಿಯಾಗಿ ಮುಕ್ತಾಯಗೊಂಡರೂ, ಟ್ರೋಫಿ ಹಸ್ತಾಂತರದ ಕುರಿತು ಉದ್ಭವಿಸಿರುವ ರಾಜಕೀಯ ಮತ್ತು ಕ್ರೀಡಾ ವಿವಾದ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ಚಾಂಪಿಯನ್ ತಂಡವಾದ ಭಾರತಕ್ಕೆ ಏಷ್ಯಾಕಪ್ ಟ್ರೋಫಿ ಮತ್ತು ಪದಕಗಳನ್ನು ನೀಡದೆ ವಿಳಂಬ ಮಾಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿ ವಿರುದ್ಧ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಪಂದ್ಯಾವಳಿ ಮುಗಿದಾದ ನಂತರವೂ ಟ್ರೋಫಿ ಭಾರತಕ್ಕೆ ಹಸ್ತಾಂತರವಾಗದಿರುವುದನ್ನು ಬಿಸಿಸಿಐ ಈಗ ನಖ್ವಿ ವಿರುದ್ಧ ನಿರ್ಣಾಯಕ ಹಂತದ ರಾಜಕೀಯ ನಡೆ ಕೈಗೊಳ್ಳಲು ತಯಾರಿ ನಡೆಸಿದೆ ಎಂದು ವರದಿಗಳು ಸೂಚಿಸುತ್ತಿವೆ. ಕೆಲ ವರದಿಗಳ ಪ್ರಕಾರ, ಬಿಸಿಸಿಐ ಅವರು ಎಸಿಸಿ ಅಧ್ಯಕ್ಷನ ಸ್ಥಾನದಿಂದ ನಖ್ವಿಯನ್ನು ಕೆಳಗಿಳಿಸಲು ಅವಿಶ್ವಾಸ ನಿರ್ಣಯ ಮಂಡಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.
ಈ ನಡುವೆ ಎಸಿಸಿ ಸಭೆಯೊಂದರಲ್ಲಿ, ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಟ್ರೋಫಿಯನ್ನು ನೇರವಾಗಿ ಭಾರತಕ್ಕೆ ಹಸ್ತಾಂತರಿಸಬೇಕು ಎಂದು ಸ್ಪಷ್ಟವಾಗಿ ಆಗ್ರಹಿಸಿದ್ದರೂ, ಮೊಹ್ಸಿನ್ ನಖ್ವಿಯವರು ತಮ್ಮ ನಿರಾಕರಣೆಯ ಮೂಲಕ ವಿವಾದಕ್ಕೆ ಎಡೆಮಾಡಿಕೊಟ್ಟಂತಿದೆ. "ಟ್ರೋಫಿ ಬೇಕೆಂದರೆ ಟೀಂ ಇಂಡಿಯಾದ ಸೂರ್ಯಕುಮಾರ್ ಯಾದವ್ ನನ್ನ ಬಳಿಗೆ ಬಂದು ತೆಗೆದುಕೊಂಡು ಹೋಗಲಿ" ಎಂಬ ವಿವಾದಾತ್ಮಕ ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ. ಇನ್ನೊಂದು ಮೂಲದ ಪ್ರಕಾರ, ನಖ್ವಿ ಟ್ರೋಫಿಯನ್ನು ಯುಎಇ ಕ್ರಿಕೆಟ್ ಮಂಡಳಿಗೆ ಹಸ್ತಾಂತರಿಸಿರುವುದಾಗಿ ಹೇಳಲಾಗಿದೆ. ಆದರೆ ಈ ಹೇಳಿಕೆಗೂ ಯಾವುದೇ ದೃಢೀಕರಣ ಸಿಕ್ಕಿಲ್ಲ.
ಈ ಎಲ್ಲ ಬೆಳವಣಿಗೆಗಳ ನಡುವೆ ಬಿಸಿಸಿಐ ತನ್ನ ಹಿತಚಿಂತಕರ ಬೆಂಬಲವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದು, ಶ್ರೀಲಂಕಾ ಕ್ರಿಕೆಟ್ ಮಂಡಳಿ ಭಾರತವನ್ನು ಬೆಂಬಲಿಸುತ್ತಿದೆ ಎಂಬ ವರದಿಗಳು ಲಭ್ಯವಿವೆ. ಬಾಂಗ್ಲಾದೇಶವು ಪಾಕಿಸ್ತಾನದ ಪರ ನಿಂತಿದ್ದು, ಅಂತಿಮ ತೀರ್ಮಾನ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ನಿಲುವಿನ ಮೇಲೆ ಅವಲಂಬಿತವಾಗಿದೆ.