ಮುಂಬೈ, ಸೆ. 30 (DaijiworldNews/AK): ಮಹಿಳಾ ಏಕದಿನ ವಿಶ್ವಕಪ್ಗೆ ಚಾಲನೆ ದೊರೆತಿದೆ. ಗುವಾಹಟಿಯ ಬರ್ಸಪಾರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಉದ್ಘಾಟನಾ ಪಂದ್ಯದಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಶ್ರೀಲಂಕಾ ತಂಡದ ನಾಯಕಿ ಚಾಮರಿ ಅಥಾಪತ್ತು ಬೌಲಿಂಗ್ ಆಯ್ದುಕೊಂಡಿದ್ದಾರೆ.

ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡಗಳು ಏಕದಿನ ಕ್ರಿಕೆಟ್ನಲ್ಲಿ ಈವರೆಗೆ 35 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಟೀಮ್ ಇಂಡಿಯಾ 31 ಬಾರಿ ಗೆಲುವು ದಾಖಲಿಸಿದರೆ, ಲಂಕಾ ಪಡೆ ಕೇವಲ 3 ಬಾರಿ ಜಯ ಸಾಧಿಸಿದೆ. ಇನ್ನು ಒಂದು ಪಂದ್ಯವು ಕಾರಣಾಂತರಗಳಿಂದ ರದ್ದಾಗಿತ್ತು.
ಇದೀಗ ಉಭಯ ತಂಡಗಳು 36ನೇ ಪಂದ್ಯದಲ್ಲಿ ಮುಖಾಮುಖಿಯಾಗಿದ್ದು, ಈ ಬಾರಿ ಕೂಡ ಟೀಮ್ ಇಂಡಿಯಾ ಗೆಲ್ಲುವ ಫೇವರೇಟ್ ತಂಡವಾಗಿ ಗುರುತಿಸಿಕೊಂಡಿದೆ. ಶ್ರೀಲಂಕಾ ತಂಡದಲ್ಲಿ ಚಾಮರಿ ಅಥಾಪತ್ತು , ಅನುಷ್ಕಾ ಸಂಜೀವನಿ , ಹಾಸಿನಿ ಪೆರೇರಾ , ವಿಶ್ಮಿ ಗುಣರತ್ನೆ , ಹರ್ಷಿತಾ ಸಮರವಿಕ್ರಮ ಅವರಂತಹ ಬಲಿಷ್ಠ ಬ್ಯಾಟರ್ಗಳ ದಂಡೇ ಇದ್ದು, ಹೀಗಾಗಿ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.
ಭಾರತ ಪ್ಲೇಯಿಂಗ್ 11: ಪ್ರತೀಕಾ ರಾವಲ್, ಸ್ಮೃತಿ ಮಂಧಾನ, ಹರ್ಲೀನ್ ಡಿಯೋಲ್, ಹರ್ಮನ್ಪ್ರೀತ್ ಕೌರ್ (ನಾಯಕಿ), ಜೆಮಿಮಾ ರೊಡ್ರಿಗಸ್, ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಅಮಂಜೋತ್ ಕೌರ್, ಸ್ನೇಹ್ ರಾಣಾ, ಕ್ರಾಂತಿ ಗೌಡ್, ಶ್ರೀ ಚರಣಿ.
ಶ್ರೀಲಂಕಾ ಪ್ಲೇಯಿಂಗ್ 11: ಚಾಮರಿ ಅಥಾಪತ್ತು (ನಾಯಕಿ), ಹಾಸಿನಿ ಪೆರೇರಾ, ಹರ್ಷಿತಾ ಸಮರವಿಕ್ರಮ, ವಿಶ್ಮಿ ಗುಣರತ್ನೆ, ಕವಿಶಾ ದಿಲ್ಹಾರಿ, ನೀಲಾಕ್ಷಿ ಡಿ ಸಿಲ್ವಾ, ಅನುಷ್ಕಾ ಸಂಜೀವನಿ (ವಿಕೆಟ್ ಕೀಪರ್), ಅಚಿನಿ ಕುಲಸೂರಿಯಾ, ಸುಗಂದಿಕಾ ಕುಮಾರಿ, ಉದೇಶಿಕಾ ಪ್ರಬೋಧನಿ, ಇನೋಕಾ ರಣವೀರ.