ನವದೆಹಲಿ, ಸೆ. 29 (DaijiworldNews/AA): ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಸೂರ್ಯಕುಮಾರ್ ಯಾದವ್ ಇದೀಗ ತನ್ನ ಏಷ್ಯಾಕಪ್ ಟೂರ್ನಿಯ ಸಂಪೂರ್ಣ ಶುಲ್ಕವನ್ನು ಭಾರತೀಯ ಸೇನೆಗೆ ಹಾಗೂ ಪಹಲ್ಗಾಮ್ ದಾಳಿಯ ಸಂತ್ರಸ್ತರ ಕುಟುಂಬಗಳಿಗೆ ದೇಣಿಗೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಟೀಮ್ ಇಂಡಿಯಾ ಏಷ್ಯಾಕಪ್ ಟ್ರೋಫಿ ಗೆದ್ದ ಬಳಿಕ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, "ಏಷ್ಯಾಕಪ್ ಟೂರ್ನಿಯ ತನ್ನೆಲ್ಲಾ ಪಂದ್ಯದ ಶುಲ್ಕಗಳನ್ನು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಬಲಿಯಾದವರ ಕುಟುಂಬಗಳಿಗೆ ಮತ್ತು ನಮ್ಮ ಸಶಸ್ತ್ರ ಪಡೆಗಳಿಗೆ ನೀಡಲು ನಿರ್ಧರಿಸಿದ್ದೇನೆ. ಈ ಮೂಲಕ ಅವರ ಬೆಂಬಲಕ್ಕೆ ನಿಲ್ಲುವುದಾಗಿ" ತಿಳಿಸಿದ್ದಾರೆ.
ಅದರಂತೆ ಏಷ್ಯಾಕಪ್ ಮೂಲಕ ಗಳಿಸಿರುವ 28 ಲಕ್ಷ ರೂ. ಅನ್ನು ಸೂರ್ಯಕುಮಾರ್ ಯಾದವ್ ಭಾರತೀಯ ಸಶಸ್ತ್ರ ಪಡೆಗೆ ಹಾಗೂ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ನೀಡಲಿದ್ದಾರೆ. ಇದೀಗ ಟೀಮ್ ಇಂಡಿಯಾ ನಾಯಕನ ಈ ನಿರ್ಧಾರಕ್ಕೆ ಭಾರತೀಯ ಕ್ರಿಕೆಟ್ ಪ್ರೇಮಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.