ದುಬೈ, ಸೆ. 29 (DaijiworldNews/AA): ಏಷ್ಯಾಕಪ್ 2025 ರ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿದ ಟೀಮ್ ಇಂಡಿಯಾಗೆ ಬಿಸಿಸಿಐ ಬರೋಬ್ಬರಿ 21 ಕೋಟಿ ನಗದು ಬಹುಮಾನ ಘೋಷಿಸಿದೆ.

ಏಷ್ಯಾ ಕಪ್ ಗೆದ್ದ ಭಾರತ ತಂಡದ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗೆ ಬಿಸಿಸಿಐ 21 ಕೋಟಿ ನಗದು ಬಹುಮಾನ ಘೋಷಣೆ ಮಾಡಿದೆ. ಜೊತೆಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ನಿಂದ (ಎಸಿಸಿ) ಚಾಂಪಿಯನ್ ತಂಡಕ್ಕೆ 2.6 ಕೋಟಿ ರೂ. ಟೂರ್ನಿಯ ಬಹುಮಾನ ಪಡೆದುಕೊಂಡಿದೆ. ರನ್ನರ್ ಅಪ್ ಪಾಕ್ ತಂಡ ಕೇವಲ 1.3 ಕೋಟಿ ರೂ. ಬಹುಮಾನ ತನ್ನದಾಗಿಸಿಕೊಂಡಿದೆ.
ಈ ಬಾರಿ ಏಷ್ಯಾಕಪ್ ಪಂದ್ಯದಲ್ಲಿ ಭಾರತ ತಂಡವು ಪಾಕ್ ತಂಡಕ್ಕೆ ಮೂರು ಬಾರಿ ಸೋಲುಣಿಸಿದೆ. ಮೊದಲ ಸುತ್ತಿನ ಪಂದ್ಯದಲ್ಲಿ 7 ವಿಕೆಟ್ಗಳ ಜಯ ಸಾಧಿಸಿದ್ದ ಟೀಮ್ ಇಂಡಿಯಾ ದ್ವಿತೀಯ ಸುತ್ತಿನಲ್ಲಿ 6 ವಿಕೆಟ್ಗಳ ಗೆಲುವು ದಾಖಲಿಸಿತ್ತು. ಇದೀಗ ಫೈನಲ್ ಪಂದ್ಯದಲ್ಲಿ 5 ವಿಕೆಟ್ಗಳಿಂದ ಸೋಲಿಸಿದೆ. ಈ ಮೂಲಕ ಪಾಕಿಸ್ತಾನ ತಂಡದ ವಿರುದ್ಧ ಭಾರತ ಹ್ಯಾಟ್ರಿಕ್ ಗೆಲುವು ಸಾಧಿಸಿದೆ.
ಏಷ್ಯಾ ಕಪ್ ಫೈನಲ್ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಗೆದ್ದರೂ, ಏಷ್ಯಾ ಕಪ್ ಟ್ರೋಫಿ ಭಾರತ ತಂಡದ ಕೈ ಸೇರಿಲ್ಲ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಮತ್ತು ಪಾಕಿಸ್ತಾನದ ಸಚಿವ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ ಟೀಂ ಇಂಡಿಯಾ ತಂಡಕ್ಕೆ ಟ್ರೋಫಿಯನ್ನು ನೀಡಲಾಗಿಲ್ಲ.