ದುಬೈ, ಸೆ. 29 (DaijiworldNews/AA): ಭಾರತದ 'ಆಪರೇಷನ್ ಸಿಂಧೂರ' ಸಮಯದಲ್ಲಿ ಮೃತರಾದ ಪಾಕಿಸ್ತಾನಿ ನಾಗರಿಕರ ಕುಟುಂಬಕ್ಕೆ ಪಂದ್ಯ ಶುಲ್ಕವನ್ನು ಪಾಕ್ ತಂಡವು ನೀಡಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸಲ್ಮಾನ್ ಅಲಿ ಅಘಾ ತಿಳಿಸಿದ್ದಾರೆ.

ಪೋಸ್ಟ್ ಪ್ರೆಸೆಂಟೇಷನ್ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಭಾರತದ 'ಆಪರೇಷನ್ ಸಿಂಧೂರ' ಸಮಯದಲ್ಲಿ ಮೃತರಾದ ಪಾಕಿಸ್ತಾನಿ ನಾಗರಿಕರ ಕುಟುಂಬಕ್ಕೆ ಪಂದ್ಯ ಶುಲ್ಕವನ್ನು ಪಾಕ್ ತಂಡವು ದೇಣಿಗೆ ನೀಡಲಿದೆ" ಎಂದು ಘೋಷಿಸಿದ್ದಾರೆ.
ಪಂದ್ಯ ಮುಗಿದ ಬಳಿಕ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಮೊದಲಿಗೆ ಪಾಕಿಸ್ತಾನ ಆಟಗಾರರಿಗೆ ರನ್ನರ್ ಆಪ್ ಬಹುಮಾನ ವಿತರಿಸಲಾಯಿತು. ಈ ವೇಳೆ, ಪಾಕ್ನ ಪ್ರತಿ ಆಟಗಾರರು ವೇದಿಕೆ ಮೇಲೆ ಬಂದಾಗಲೂ 'ಮೋದಿ… ಮೋದಿ, ಇಂಡಿಯಾ' ಎಂದು ಪ್ರೇಕ್ಷಕರು ಘೋಷಣೆ ಕೂಗಿದ್ದಾರೆ. ಇದರಿಂದ ಪಾಕ್ ಆಟಗಾರರು ತೀವ್ರ ಮುಜುಗರಕ್ಕೊಳಗಾಗಿದ್ದು, ರನ್ನರ್ ಅಪ್ ಬಹುಮಾನಕ್ಕೆ ಬಂದ ಪಾಕ್ ಕ್ಯಾಪ್ಟನ್ ಸಲ್ಮಾನ್ ಬಾಂಗ್ಲಾ ಕ್ರಿಕೆಟ್ ಮುಖ್ಯಸ್ಥರಿಂದ ಚೆಕ್ನ್ನು ಪಡೆದು ವೇದಿಕೆ ಮೇಲೆಯೇ ಹರಿದು ಎಸೆದಿದ್ದಾರೆ.
ಇನ್ನು ಭಾರತದ ಆಟಗಾರರಿಗೆ ಕಪ್ ನೀಡಲು ನಖ್ವಿ ವೇದಿಕೆಗೆ ಬಂದಾಗ ಟೀಂ ಇಂಡಿಯಾ ಆಟಗಾರರು ವೇದಿಕೆಯಿಂದ 10-15 ಅಡಿ ದೂರ ನಿಂತು ಟ್ರೋಫಿ ಸ್ವೀಕರಿಸಲು ನಿರಾಕರಿಸಿದ್ದಾರೆ. ಅಲ್ಲದೇ ಟ್ರೋಫಿ ಸ್ವೀಕರಿಸದೇ ಮೈದಾನದಲ್ಲಿ ಗೆಲುವನ್ನು ಸಂಭ್ರಮಿಸಿದ್ದಾರೆ. ಪಂದ್ಯ ಶ್ರೇಷ್ಠ ಸೇರಿದಂತೆ ಇನ್ನಿತರ ಪ್ರಶಸ್ತಿಯನ್ನು ಉಳಿದ ಗಣ್ಯರಿಂದ ಭಾರತದ ಆಟಗಾರರು ಪಡೆದಿದ್ದಾರೆ. ಇದೀಗ ಟ್ರೋಫಿ ಇಲ್ಲದೇ ಟೀಮ್ ಇಂಡಿಯಾ ಸಂಭ್ರಮಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.