ಮುಂಬೈ, ಸೆ. 28 (DaijiworldNews/AA): ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿ ಮಿಥುನ್ ಮನ್ಹಾಸ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.

ಭಾನುವಾರ ಮುಂಬೈನಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ) ಬಳಿಕ ಮಿಥುನ್ ಮನ್ಹಾಸ್ ಅವರನ್ನು ಅಧಿಕೃತವಾಗಿ ಬಿಸಿಸಿಐನ ಅಧ್ಯಕ್ಷರಾಗಿ ನೇಮಿಸಲಾಗಿದೆ. ರೋಜರ್ ಬಿನ್ನಿ ನಂತರ ಭಾರತೀಯ ಕ್ರಿಕೆಟ್ ಆಡಳಿತವನ್ನು ಮಾರ್ಗದರ್ಶನ ಮಾಡುವ ಜವಾಬ್ದಾರಿಯನ್ನು ಮಿಥುನ್ ಮನ್ಹಾಸ್ ವಹಿಸಿಕೊಂಡಿದ್ದಾರೆ.
ಮಿಥುನ್ ಮನ್ಹಾಸ್ ಅವರು ಸೌರವ್ ಗಂಗೂಲಿ ಮತ್ತು ರೋಜರ್ ಬಿನ್ನಿ ಬಳಿಕ ಈ ಹುದ್ದೆಯನ್ನು ಅಲಂಕರಿಸಿದ ಮೂರನೇ ಕ್ರಿಕೆಟಿಗರಾಗಿದ್ದಾರೆ. ಇನ್ನು ಬಿಸಿಸಿಐನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಿಥುನ್ ಒಂದೇ ಒಂದು ಅಂತರರಾಷ್ಟ್ರೀಯ ಪಂದ್ಯವನ್ನಾಡಿಲ್ಲ. ಈ ಮೂಲಕ ಅಂತರರಾಷ್ಟ್ರೀಯ ಪಂದ್ಯವನ್ನಾಡದೆ ಬಿಸಿಸಿಐನ ಚುಕ್ಕಾಣಿ ಹಿಡಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಮಿಥುನ್ ಪಾತ್ರರಾಗಿದ್ದಾರೆ. ಈ ಹಿಂದೆ ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್ನ ಕ್ರಿಕೆಟ್ ನಿರ್ದೇಶಕರಾಗಿ ಮಿಥುನ್ ಮನ್ಹಾಸ್ ಸೇವೆ ಸಲ್ಲಿಸಿರುತ್ತಾರೆ.
ಕ್ರಿಕೆಟ್ ಆಡಳಿತ ಮತ್ತು ಕಾರ್ಯತಂತ್ರದ ಯೋಜನೆ ಎರಡರಲ್ಲೂ ಅಪಾರ ಅನುಭವ ಹೊಂದಿರುವ ರಾಜೀವ್ ಶುಕ್ಲಾ ಅವರನ್ನು ಬಿಸಿಸಿಐನ ಉಪಾಧ್ಯಕ್ಷರನ್ನಾಗಿ ಘೋಷಿಸಲಾಗಿದೆ. ದೇವಜಿತ್ ಸೈಕಿಯಾ ಅವರನ್ನು ಗೌರವಾನ್ವಿತ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು. ಆದರೆ, ಪ್ರಭತೇಜ್ ಸಿಂಗ್ ಭಾಟಿಯಾ ಜಂಟಿ ಕಾರ್ಯದರ್ಶಿಯಾಗಿ ಪಾತ್ರ ವಹಿಸಿದರು. ಎ.ರಘುರಾಮ್ ಭಟ್ ಅವರು ಖಜಾಂಚಿಯಾಗಿ ಹಣಕಾಸು ಉಸ್ತುವಾರಿ ವಹಿಸಲಿದ್ದಾರೆ.