ದುಬೈ, ಸೆ. 27 (DaijiworldNews/AA): ಯುಎಇನಲ್ಲಿ ನಡೆಯುತ್ತಿರುವ ಏಷ್ಯಾಕಪ್ ಟೂರ್ನಿಯಲ್ಲಿ ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ ಹಿನ್ನೆಲೆ ಟೀಂ ಇಂಡಿಯಾ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಹಾಗೂ ಪಾಕ್ ವೇಗಿ ಹ್ಯಾರಿಸ್ ರೌಫ್ಗೆ ಪಂದ್ಯ ಶುಲ್ಕದ ತಲಾ 30% ದಂಡ ವಿಧಿಸಲಾಗಿದೆ.

ಶುಕ್ರವಾರ ವಿಚಾರಣೆ ಮುಗಿದ ಬಳಿಕ ಮ್ಯಾಚ್ ರೆಫರಿ ರಿಚಿ ರಿಚರ್ಡ್ಸನ್ ಇಬ್ಬರೂ ಆಟಗಾರರಿಗೆ ಪಂದ್ಯ ಶುಲ್ಕದ 30% ದಂಡ ವಿಧಿಸಿದ್ದಾರೆ. ಆದರೆ ಗನ್ ಸೆಲೆಬ್ರೇಷನ್ ಮಾಡಿದ್ದ ಸಾಹಿಬ್ಜಾದಾ ಫರ್ಹಾನ್ಗೆ ಎಚ್ಚರಿಕೆ ನೀಡಲಾಗಿದೆ.
ಏಷ್ಯಾಕಪ್ ಟೂರ್ನಿಯಲ್ಲಿ ಪಾಕ್ ವಿರುದ್ಧ ಭಾರತ ಗೆದ್ದಾಗ ನಾಯಕ ಸೂರ್ಯಕುಮಾರ್ ಯಾದವ್ ಪಂದ್ಯದ ಗೆಲುವು ಪಹಲ್ಗಾಮ್ ಸಂತ್ರಸ್ತರು ಹಾಗೂ ಭಾರತೀಯ ಸೇನೆಗೆ ಅರ್ಪಣೆ ಎಂದಿದ್ದರು. ಈ ಹೇಳಿಕೆ ರಾಜಕೀಯ ಪ್ರೇರಿತವಾಗಿದೆ ಎಂದು ಪಿಸಿಬಿ ಐಸಿಸಿಗೆ ದೂರು ಸಲ್ಲಿಸಿತ್ತು. ಈ ಬಗ್ಗೆ ಸೂರ್ಯರನ್ನ ವಿಚಾರಣೆ ನಡೆಸಿದಾಗ ತನ್ನದೇನು ತಪ್ಪಿಲ್ಲವೆಂದು ಒಪ್ಪಿಕೊಂಡರು. ಬಳಿಕ ಐಸಿಸಿ 30% ದಂಡ ವಿಧಿಸಿ ಆದೇಶ ಹೊರಡಿಸಿತು. ಏಷ್ಯಾ ಕಪ್ ಮುಗಿದ ಬಳಿಕವೇ ಐಸಿಸಿಯಿಂದ ಅಧಿಕೃತ ದೃಢೀಕರಣ ಸಿಗಲಿದೆ ಎಂದು ರಿಚರ್ಡ್ಸನ್ ತಿಳಿಸಿದ್ದಾರೆ.
ಮತ್ತೊಂದು ಕಡೆ ಪ್ಲೇನ್ ಕ್ರ್ಯಾಶ್ ಸನ್ನೆ ಮಾಡಿ ಸಂಭ್ರಮಿಸಿದ್ದ ಪಾಕ್ ವೇಗಿ ಹ್ಯಾರಿಸ್ ರೌಫ್ ವಿರುದ್ಧ ಬಿಸಿಸಿಐ ಐಸಿಸಿಗೆ ದೂರು ನೀಡಿತ್ತು. ವಿಚಾರಣೆ ಬಳಿಕ ಐಸಿಸಿ ಹ್ಯಾರಿಸ್ ರೌಫ್ಗೂ ದಂಡ ವಿಧಿಸಿತು. ಇನ್ನೂ ಸೂಪರ್ ಫೋರ್ನ ಮೊದಲ ಪಂದ್ಯದಲ್ಲಿ ಫಿಫ್ಟಿ ಬಾರಿಸಿ ಗನ್ ಸೆಲೆಬ್ರೇಷನ್ ಮಾಡಿದ ಫರ್ಹಾನ್ಗೆ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ.