ದುಬೈ, ಸೆ. 13 (DaijiworldNews/AK): ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾಕಪ್ ಪಂದ್ಯ ನಾಳೆ (ಸೆ.14) ನಡೆಯಲಿದೆ. ದುಬೈ ಕ್ರೀಡಾಂಗಣದಲ್ಲಿ ರಾತ್ರಿ 8ಕ್ಕೆ ಪಂದ್ಯ ಶುರುವಾಗಲಿದೆ. ಈ ನಡುವೆ ಮೊದಲ ಪಂದ್ಯ ಗೆದ್ದು ಶುಭಾರಂಭ ಮಾಡಿರುವ ಪಾಕ್ ತಂಡದ ನಾಯಕ ಸಲ್ಮಾನ್ ಅಘಾ ಟೀಂ ಇಂಡಿಯಾಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.

ಶುಕ್ರವಾರ ಒಮನ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಪಾಕ್ 93 ರನ್ಗಳ ಭರ್ಜರಿ ಜಯ ಸಾಧಿಸಿತು. ಪಂದ್ಯದ ಬಳಿಕ ಪೋಸ್ಟ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ನಾಯಕ ಸಲ್ಮಾನ್ ಅಘಾ, ನಾವು ನಮ್ಮ ಪ್ಲ್ಯಾನಿಂಗ್ ಅನ್ನು ಸರಿಯಾದ ರೀತಿಯಲ್ಲಿ ಕಾರ್ಯಗತಗೊಳಿಸಿದ್ರೆ ಭಾರತ ಸೇರಿದಂತೆ ಯಾವುದೇ ತಂಡವನ್ನು ಸೋಲಿಸುವಷ್ಟು ಸಮರ್ಥರಿದ್ದೇವೆ ಎಂದು ತಿಳಿಸಿದರು.
ಕಳೆದ 2-3 ತಿಂಗಳಿನಿಂದ ನಾವು ಉತ್ತಮ ಕ್ರಿಕೆಟ್ ಆಡ್ತಿದ್ದೇವೆ, ಇದು ಇನ್ನಷ್ಟು ಬೆಳವಣಿಗೆ ಆಗಬೇಕಾಗಿದೆ. ಅದಕ್ಕಾಗಿ ದೀರ್ಘಕಾಲದ ವರೆಗೆ ನಮ್ಮ ಪ್ಲ್ಯಾನಿಂಗ್ ಅನ್ನು ಸಕ್ರಿಯಗೊಳಿಸಬೇಕು. ಆಗ ಯಾವುದೇ ತಂಡವನ್ನು ಸೋಲಿಸಲು ನಮ್ಮಿಂದ ಸಾಧ್ಯವಾಗುತ್ತದೆ ಎಂದು ಸಹ ಆಟಗಾರರಿಗೆ ಕಿವಿಮಾತು ಹೇಳಿದರು.
ಶುಕ್ರವಾರ ಒಮನ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ಮೊಹಮ್ಮದ್ ಹ್ಯಾರಿಸ್ ಅವರ ಅಮೋಘ ಅರ್ಧಶತಕದ ನೆರವಿನಿಂದ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಒಮನ್ ಕೇವಲ 67 ರನ್ಗಳಿಗೆ ಆಲೌಟ್ ಆಗಿ ಹೀನಾಯ ಸೋಲು ಕಂಡಿತು.