ಬೆಂಗಳೂರು, ಸೆ. 09 (DaijiworldNews/TA): ಟಿ20 ಮಾದರಿಯಲ್ಲಿ ನಡೆಯುವ ಏಷ್ಯಾಕಪ್ 2025 ಇಂದು ಪ್ರಾರಂಭವಾಗಲಿದ್ದು, ಅದರಲ್ಲಿ ಮೊದಲ ಪಂದ್ಯ ಅಫ್ಘಾನಿಸ್ತಾನ ಮತ್ತು ಹಾಂಗ್ ಕಾಂಗ್ ನಡುವೆ ನಡೆಯಲಿದೆ. ಈ ಪಂದ್ಯ ಗ್ರೂಪ್ ಬಿಗೆ ಸೇರಿದ್ದು, ಇದರಲ್ಲಿ ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಡಗಳೂ ಸೇರಿವೆ. ಇನ್ನು ಗ್ರೂಪ್ ಎ ನಲ್ಲಿ ಭಾರತ, ಪಾಕಿಸ್ತಾನ, ಒಮಾನ್ ಹಾಗೂ ಯುಎಇ ತಂಡಗಳಿವೆ. ಇಂದು ನಡೆಯಲಿರುವ ಪಂದ್ಯವು ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ರಾತ್ರಿ 8 ಗಂಟೆಗೆ ಆರಂಭವಾಗಲಿದೆ.

ಇದುವರೆಗೆ ಅಫ್ಘಾನಿಸ್ತಾನ ಮತ್ತು ಹಾಂಗ್ ಕಾಂಗ್ ತಂಡಗಳು 5 ಬಾರಿ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಅಫ್ಘಾನಿಸ್ತಾನ 3ರಲ್ಲಿ ಗೆದ್ದರೆ, ಹಾಂಗ್ ಕಾಂಗ್ 2 ಪಂದ್ಯಗಳಲ್ಲಿ ಜಯ ಗಳಿಸಿದೆ. 2014ರಲ್ಲಿ ಅಫ್ಘಾನಿಸ್ತಾನ ಮೊದಲ ಪಂದ್ಯದಲ್ಲಿ ಗೆದ್ದಿತ್ತು. 2015ರಲ್ಲಿ ನಡೆದ 2 ಪಂದ್ಯಗಳಲ್ಲಿ ಹಾಂಗ್ ಕಾಂಗ್ ಮೇಲುಗೈ ಸಾಧಿಸಿತು, ಆದರೆ 2016ರಲ್ಲಿ ನಡೆದ ಎರಡೂ ಪಂದ್ಯಗಳಲ್ಲಿ ಅಫ್ಘಾನಿಸ್ತಾನ ಜಯಭೇರಿ ಬಾರಿಸಿತು. ಇಂದಿನ ಪಂದ್ಯದಿಂದ ಎರಡೂ ತಂಡಗಳು 9 ವರ್ಷಗಳ ನಂತರ ಟಿ20 ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಮುಖಾಮುಖಿಯಾಗಲಿವೆ.
ಅಫ್ಘಾನಿಸ್ತಾನ ತಂಡವನ್ನು ರಶೀದ್ ಖಾನ್ ಅವರು ಮುನ್ನಡೆಸಲಿದ್ದು, ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಝದ್ರಾನ್, ಮೊಹಮ್ಮದ್ ನಬಿ, ಮುಜೀಬ್ ಉರ್ ರಹ್ಮಾನ್, ನವೀನ್-ಉಲ್-ಹಕ್ ಸೇರಿದಂತೆ ಅನುಭವಿ ಆಟಗಾರರು ತಂಡದಲ್ಲಿದ್ದಾರೆ. ಹಾಂಗ್ ಕಾಂಗ್ ತಂಡವನ್ನು ಯಾಸಿಮ್ ಮುರ್ತಾಜಾ ಅವರು ನಾಯಕತ್ವ ವಹಿಸಿಕೊಂಡಿದ್ದು, ಬಾಬರ್ ಹಯಾತ್, ಅಂಶುಮಾನ್ ರಾತ್, ಎಹ್ಸಾನ್ ಖಾನ್, ಅತೀಕ್ ಉಲ್ ರೆಹಮಾನ್ ಹಾಗೂ ಇತರ ಪ್ರಮುಖ ಆಟಗಾರರು ಇರಲಿದ್ದಾರೆ.
ಆಟದ ಹೋರಾಟದಲ್ಲಿ ಅಫ್ಘಾನಿಸ್ತಾನ ಪ್ರಬಲ ಸ್ಪರ್ಧಿ ಎನಿಸಿಕೊಂಡಿದ್ದರೂ, ಹಾಂಗ್ ಕಾಂಗ್ ತಂಡವನ್ನು ಅಲ್ಲಗೆಳೆಯುವಂತಿಲ್ಲ. ಈ ಪಂದ್ಯವು ಟೂರ್ನಿಯ ಆರಂಭಿಕ ಹೋರಾಟಕ್ಕೆ ಉತ್ತಮ ಟೋನ್ ನೀಡಲಿದೆ.