ಜೈಪುರ, ಆ. 30 (DaijiworldNews/AA): 2026ರ ಐಪಿಎಲ್ ಟೂರ್ನಿಗೂ ಮುನ್ನವೇ ರಾಹುಲ್ ದ್ರಾವಿಡ್ ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯಕೋಚ್ ಹುದ್ದೆಯಿಂದ ಕೆಳಗಿಳಿದಿದ್ದಾರೆ.

2025ರ ಐಪಿಎಲ್ ಟೂರ್ನಿ ವೇಳೆ ರಾಜಸ್ಥಾನ್ ತಂಡದ ಕೋಚ್ ಆಗಿದ್ದ ದ್ರಾವಿಡ್ ಒಂದೇ ವರ್ಷಕ್ಕೆ ಫ್ರಾಂಚೈಸಿಯಿಂದ ಹೊರ ನಡೆದಿದ್ದಾರೆ. ದ್ರಾವಿಡ್ ಹೆಡ್ ಕೋಚ್ ಹುದ್ದೆಯಿಂದ ಕೆಳಗಿಳಿಯುವ ಬಗ್ಗೆ ರಾಜಸ್ಥಾನ್ ರಾಯಲ್ಸ್ ಶನಿವಾರ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ತಿಳಿಸಿದೆ.
ರಾಜಸ್ಥಾನ್ ರಾಯಲ್ಸ್ ತಂಡದ ಪ್ರಯಾಣದಲ್ಲಿ ರಾಹುಲ್ ಹಲವು ವರ್ಷಗಳಿಂದ ಕೇಂದ್ರಬಿಂದುವಾಗಿದ್ದಾರೆ. ಅವರ ನಾಯಕತ್ವವು ಒಂದು ಪೀಳಿಗೆಯ ಆಟಗಾರರ ಮೇಲೆ ಪ್ರಭಾವ ಬೀರಿದೆ. ತಂಡದೊಳಗೆ ದೊಡ್ಡ ಮೌಲ್ಯಗಳನ್ನು ನಿರ್ಮಿಸಿದೆ ಮತ್ತು ಫ್ರಾಂಚೈಸಿಯೊಂದಿಗೆ ಅಳಿಸಲಾಗದ ಗುರುತು ಬಿಟ್ಟಿದ್ದಾರೆ. ಫ್ರಾಂಚೈಸಿ ರಚನಾತ್ಮಕ ಪರಿಶೀಲನೆಯ ಭಾಗವಾಗಿ, ರಾಹುಲ್ಗೆ ಫ್ರಾಂಚೈಸಿಯಲ್ಲಿ ವಿಶಾಲವಾದ ಸ್ಥಾನ ನೀಡಲಾಗಿತ್ತು, ಆದರೆ ಅದನ್ನು ತೆಗೆದುಕೊಳ್ಳದಿರಲು ಅವರು ನಿರ್ಧರಿಸಿದ್ದಾರೆ ಎಂದು ರಾಜಸ್ಥಾನ್ ರಾಯಲ್ಸ್ ಪೋಸ್ಟ್ ಮಾಡಿದೆ.
ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಮತ್ತು ವಿಶ್ವದಾದ್ಯಂತ ಇರುವ ಫ್ರಾಂಚೈಸಿಯ ಎಲ್ಲಾ ಆಟಗಾರರು ಹಾಗೂ ಲಕ್ಷಾಂತರ ಅಭಿಮಾನಿಗಳು ರಾಹುಲ್ ದ್ರಾವಿಡ್ ಅವರ ಸೇವೆಗೆ ಹೃತ್ಪೂರ್ವಕ ಧನ್ಯವಾದ ಅರ್ಪಿಸಿದ್ದಾರೆ ಎಂದು ಫ್ರಾಂಚೈಸಿ ಮಾಹಿತಿ ನೀಡಿದೆ.