ಬೆಂಗಳೂರು, ಆ. 30 (DaijiworldNews/AA): ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಿಗೆ ಜೂನ್ 4 ಕರಾಳ ದಿನವಾಗಿತ್ತು. ಜೂನ್ 4 ರಂದು ಬೆಂಗಳೂರಿನಲ್ಲಿ ನಡೆದ ಆರ್ಸಿಬಿ ಕಪ್ ಗೆದ್ದ ಸಂಭ್ರಮಾಚರಣೆ ವೇಳೆ ಉಂಟಾದ ಕಾಲ್ತುಳಿತದಿಂದಾಗಿ 11 ಮಂದಿ ಪ್ರಾಣಕಳೆದುಕೊಂಡಿದ್ದರು. ಈ ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಆರ್ಸಿಬಿ ಫ್ರಾಂಚೈಸಿ ತಲಾ 25 ಲಕ್ಷ ರೂ. ನೀಡುವುದಾಗಿ ತಿಳಿಸಿದೆ.

ಸಂಭ್ರಮಾಚರಣೆ ವೇಳೆ ಕಾಲ್ತುಳಿತದಿಂದ ಮೃತಪಟ್ಟ ಪ್ರತಿ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಆರ್ಥಿಕ ಸಹಾಯ ನೀಡಿರುವುದಾಗಿ ಆರ್ಸಿಬಿ ಫ್ರಾಂಚೈಸಿ ಅಧಿಕೃತವಾಗಿ ಪ್ರಕಟಿಸಿದೆ. ಈ ಮೂಲಕ ಆರ್ಸಿಬಿ ಹೊಸ ಅಧ್ಯಾಯವನ್ನು ಕೂಡ ಪ್ರಾರಂಭಿಸಿದೆ.
ಅಭಿಮಾನಿಗಳ ಸಾವಿನ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಆರ್ಸಿಬಿ ಕೇರ್ಸ್ ಪ್ರಾರಂಭಿಸಿದೆ. ಇದೀಗ ಆರ್ಸಿಬಿ ಫ್ರಾಂಚೈಸಿ ಮೃತಪಟ್ಟ ಕುಟುಂಬಗಳಿಗೆ ಧನ ಸಹಾಯ ನೀಡಿದೆ. ಅಲ್ಲದೆ ಆರ್ಸಿಬಿ ಕೇರ್ಸ್ ಮೂಲಕ ಇನ್ನಷ್ಟು ಸಹಾಯಹಸ್ತ ನೀಡುವ ಹಾಗೂ ಕಾರ್ಯಕ್ರಮಗಳನ್ನು ಆಯೋಜಿಸುವ ಭರವಸೆಯನ್ನು ಸಹ ನೀಡಿದೆ.