ಬೆಂಗಳೂರು, ಆ. 15 (DaijiworldNews/AA): "ದೇಶದ ಮುಂದೆ ಕ್ರಿಕೆಟ್ ತುಂಬಾ ಚಿಕ್ಕ ವಿಷಯ" ಎಂದು ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ತಿಳಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, "ಯಾವುದು ಮುಖ್ಯ ಮತ್ತು ಯಾವುದು ಅಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಇದು ತುಂಬಾ ಸರಳ. ನನಗೆ, ಗಡಿಯಲ್ಲಿ ನಿಂತು ಕೆಲವೊಮ್ಮೆ ಮನೆಗೆ ಮರಳಲೂ ಸಾಧ್ಯವಾಗದ ಸೈನಿಕ ಹೆಚ್ಚು ಮುಖ್ಯ. ಅವರು ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡುತ್ತಾರೆ. ಅವರ ತ್ಯಾಗ ನಮಗೆಲ್ಲರಿಗೂ ಬಹಳ ದೊಡ್ಡದು" ಎಂದರು.
"ದೇಶದ ಸೈನಿಕರಿಗೆ ಹೋಲಿಸಿದರೆ ಕ್ರಿಕೆಟ್ ತುಂಬಾ ಸಣ್ಣ ವಿಷಯ. ಗಡಿಯಲ್ಲಿ ಉದ್ವಿಗ್ನತೆ ಉಂಟಾಗಿ ನಾವು ಅವರೊಂದಿಗೆ ಕ್ರಿಕೆಟ್ ಆಡುವುದು ಸಾಧ್ಯವಿಲ್ಲ. ಎಲ್ಲಾ ಸಮಸ್ಯೆಗಳು ಬಗೆಹರಿಯುವವರೆಗೆ, ನಾವು ಅವರೊಂದಿಗೆ ಕ್ರಿಕೆಟ್ ಆಡಬಾರದು. ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಎಂಬುದು ನಮ್ಮ ಸರ್ಕಾರದ ನಿಲುವು" ಎಂದು ಹೇಳಿದರು.
ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ್ ನಂತರ, ಇತ್ತೀಚೆಗೆ ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ (ಡಬ್ಲ್ಯೂಸಿಎಲ್) ಸಮಯದಲ್ಲಿ, ಭಾರತ ಚಾಂಪಿಯನ್ಸ್ ಗುಂಪು ಹಂತ ಮತ್ತು ಸೆಮಿಫೈನಲ್ ಎರಡರಲ್ಲೂ ಪಾಕಿಸ್ತಾನ ಚಾಂಪಿಯನ್ಗಳನ್ನು ಎದುರಿಸಲು ನಿರಾಕರಿಸಿತ್ತು. ಶಿಖರ್ ಧವನ್, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್, ಸುರೇಶ್ ರೈನಾ ಮತ್ತು ಯೂಸುಫ್ ಪಠಾಣ್ ಅವರನ್ನು ಒಳಗೊಂಡ ಭಾರತೀಯ ತಂಡವು ಪಾಕ್ ವಿರುದ್ಧ ನಾವು ಆಡಲ್ಲ ಎಂದು ತಮ್ಮ ನಿಲುವು ವ್ಯಕ್ತಪಡಿಸಿದ್ದರು. ಇದೀಗ "ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡವು ಮುಂಬರುವ ಏಷ್ಯಾಕಪ್ನಲ್ಲೂ ಇದೇ ರೀತಿಯ ನಿಲುವನ್ನು ತೆಗೆದುಕೊಳ್ಳಬೇಕು ಮತ್ತು ತಮ್ಮ ಸಾಂಪ್ರದಾಯಿಕ ಎದುರಾಳಿಗಳನ್ನು ಎದುರಿಸಲು ನಿರಾಕರಿಸಬೇಕು" ಎಂದು ಹರ್ಭಜನ್ ಹೇಳಿದ್ದಾರೆ.