ಬೆಂಗಳೂರು, ಆ. 01 (DaijiworldNews/AA): ಧನಶ್ರೀ ಅವರಿಂದ ವಿಚ್ಛೇದನ ಪಡೆದ ನಂತರ ಜನರು ನನ್ನನ್ನು 'ವಂಚಕ' ಎಂದು ಕರೆದರು. ಆ ಸಮಯದಲ್ಲಿ ನಾನು ಆತ್ಮಹತ್ಯೆ ಮಾಡಿಕೊಳ್ಳ ಬೇಕು ಎಂದು ಆಲೋಚಿಸುತ್ತಿದ್ದೆ ಎಂಬ ಆಘಾತಕಾರಿ ವಿಷಯವನ್ನ ಭಾರತ ಕ್ರಿಕೆಟ್ ತಂಡದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ತಿಳಿಸಿದ್ದಾರೆ.

ಸಂದರ್ಶನವೊಂದರಲ್ಲಿ ತಮ್ಮ ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಿದ ಅವರು, "ಧನಶ್ರೀ ವರ್ಮಾ ಅವರಿಂದ ವಿಚ್ಛೇದನದ ನಂತರ ತಮ್ಮನ್ನು 'ವಂಚಕ' ಎಂದು ತಪ್ಪಾಗಿ ಹಣೆಪಟ್ಟಿ ಕಟ್ಟಲಾಗಿದೆ. ನನ್ನನ್ನು ಮೋಸಗಾರ ಎಂದು ಕರೆಯಲಾಯಿತು, ಆದರೆ ನಾನು ಜೀವನದಲ್ಲಿ ಎಂದಿಗೂ ಮೋಸ ಮಾಡಲಿಲ್ಲ. ನಾನು ಅತ್ಯಂತ ನಿಷ್ಠಾವಂತ ವ್ಯಕ್ತಿ. ನನ್ನಂತಹ ನಿಷ್ಠಾವಂತ ವ್ಯಕ್ತಿಯನ್ನು ನೀವು ಎಲ್ಲಿಯೂ ಕಾಣುವುದಿಲ್ಲ. ನಾನು ನನ್ನೊಂದಿಗಿರುವ ಜನರ ಬಗ್ಗೆ ತುಂಬಾ ಕಾಳಜಿ ವಹಿಸುತ್ತೇನೆ. ನನಗೆ ಇಬ್ಬರು ಸಹೋದರಿಯರಿದ್ದಾರೆ, ಆದ್ದರಿಂದ ಮಹಿಳೆಯರನ್ನು ಹೇಗೆ ಗೌರವಿಸಬೇಕೆಂದು ನನಗೆ ತಿಳಿದಿದೆ. ನನಗೆ ಅತ್ಯಂತ ನೋವುಂಟುಮಾಡುವ ವಿಷಯವೆಂದರೆ ಜನರು ನನ್ನ ಇಡೀ ಕಥೆಯನ್ನು ತಿಳಿಯದೆಯೇ ಅವರಿಗೆ ಅನಿಸಿದ್ದನ್ನ ಬರೆಯುತ್ತಾರೆ" ಎಂದು ಹೇಳಿದರು.
ತಮ್ಮ ವಿಚ್ಛೇದನ ಬಗ್ಗೆ ಮಾತನಾಡಿದ ಅವರು, "ಒಟ್ಟಿಗೆ ಉತ್ತಮ ಸಮಯ ಕಳೆಯಲು ಸಾಧ್ಯವಾಗದ ಕಾರಣ ಅಂತರ ಹೆಚ್ಚಾಯಿತು. ಎರಡೂ ಕಡೆಯಿಂದ ರಾಜಿ ಅಗತ್ಯವಾಗಿದ್ದರೂ, ಕೆಲವೊಮ್ಮೆ ಭಿನ್ನಾಭಿಪ್ರಾಯಗಳಿಂದಾಗಿ ಎಲ್ಲವೂ ಹಾಳಾಗುತ್ತದೆ ಎಂದು ಹೇಳಿದರು. ತಾವು ಮತ್ತು ಧನಶ್ರೀ ಇಬ್ಬರೂ ತಮ್ಮ ತಮ್ಮ ವೃತ್ತಿಜೀವನದಲ್ಲಿ ಬ್ಯುಸಿಯಾಗಿದ್ದೇವೆ. ಇದರಿಂದಾಗಿ, ಕಳೆದ ಕೆಲವು ವರ್ಷಗಳಿಂದ ಇಬ್ಬರ ನಡುವಿನ ಉದ್ವಿಗ್ನತೆ ಹೆಚ್ಚಾಗಿದ್ದು, ಅದು ಕ್ರಮೇಣ ಸಂಬಂಧದ ಮೇಲೆ ಪರಿಣಾಮ ಬೀರುತ್ತಿತ್ತು" ಎಂದು ತಿಳಿಸಿದರು.
"ನಾನು ನಾಲ್ಕೈದು ತಿಂಗಳುಗಳಿಂದ ತುಂಬಾ ಖಿನ್ನತೆಯಲ್ಲಿದ್ದೆ. ನನಗೆ ತುಂಬಾ ಆತಂಕ ಆಗುತ್ತಿತ್ತು. ನನ್ನ ಕಣ್ಣುಗಳಲ್ಲಿ ಕತ್ತಲೆ ಆವರಿಸುತ್ತಿತ್ತು. ಆ ಸಮಯದಲ್ಲಿ ನನ್ನೊಂದಿಗಿದ್ದ ಕೆಲವೇ ಜನರಿಗೆ ಈ ವಿಷಯಗಳು ತಿಳಿದಿದ್ದವು. ಇದಲ್ಲದೆ, ನಾನು ಈ ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳಲಿಲ್ಲ. ಈ ಸಮಯದಲ್ಲಿ, ನಾನು ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆಯೂ ಯೋಚಿಸುತ್ತಿದ್ದೆ, ಏಕೆಂದರೆ ಆಗ ನನ್ನ ಮೆದುಳು ಸಂಪೂರ್ಣವಾಗಿ ಕೆಲಸ ಮಾಡುವುದನ್ನು ನಿಲ್ಲಿಸಿತ್ತು" ಎಂದರು.
"ಜೀವನದಲ್ಲಿ ಎಲ್ಲಾ ಸೌಲಭ್ಯಗಳನ್ನು ಹೊಂದಿದ್ದರೂ, ನಾನು ಖಾಲಿತನ ಅನುಭವಿಸುತ್ತಿದ್ದೆ. ನಿಮ್ಮ ಜೀವನದಲ್ಲಿ ಎಲ್ಲವೂ ಇದೆ, ಎಲ್ಲಾ ಸೌಕರ್ಯಗಳಿವೆ, ಆದರೆ ನಿಮಗೆ ಸಂತೋಷವಿರದಿದ್ದರೆ ಏನೂ ಇಲ್ಲ ಎಂದು ಅವರು ಹೇಳಿದರು. ನೀವು ಯಾರೊಂದಿಗಾದರೂ ಕಾಣಿಸಿಕೊಂಡ ಮಾತ್ರಕ್ಕೆ ಜನರು ನಿಮ್ಮ ಬಗ್ಗೆ ಏನು ಬೇಕಾದರೂ ಯೋಚಿಸುತ್ತಾರೆ ಮತ್ತು ವೀವ್ಸ್ ಹೆಚ್ಚಿಸಲು ಏನು ಬೇಕಾದರೂ ಬರೆಯುತ್ತಾರೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.