ನವದೆಹಲಿ, ಜು. 31 (DaijiworldNews/AA): ಬರೋಬ್ಬರಿ 128 ವರ್ಷಗಳ ಬಳಿಕ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ಗೂ ಅವಕಾಶ ನೀಡಲಾಗಿದೆ. 2028 ರಲ್ಲಿ ಲಾಸ್ ಏಂಜಲೀಸ್ನಲ್ಲಿ ನಡೆಯಲಿರುವ ಒಲಿಂಪಿಕ್ಸ್ಗೆ ತಂಡಗಳನ್ನು ಫೈನಲ್ ಮಾಡುವಂತೆ ಐಸಿಸಿಗೆ ಸೂಚಿಸಿದೆ.

ಇದರ ಬೆನ್ನಲ್ಲೇ ಐಸಿಸಿ ಅರ್ಹತಾ ಮಾರ್ಗವನ್ನು ಅಂತಿಮಗೊಳಿಸಲು ಮುಂದಾಗಿದೆ. ಜಾಗತಿಕ ಕ್ರೀಡಾಕೂಟದಲ್ಲಿ 6 ತಂಡಗಳಿಗೆ ಅವಕಾಶ ನೀಡಲು ಒಲಿಂಪಿಕ್ಸ್ ಆಯೋಜಕರು ನಿರ್ಧರಿಸಿದ್ದಾರೆ. ಈ ಬಗ್ಗೆ ಜುಲೈನಲ್ಲಿ ಸಿಂಗಾಪುರದಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಐಸಿಸಿ ಕೂಡ ಚರ್ಚಿಸಿದೆ. ಇದೇ ವೇಳೆ ತಂಡಗಳ ಆಯ್ಕೆಗಾಗಿ ಪ್ರಾದೇಶಿಕ ಅರ್ಹತಾ ವ್ಯವಸ್ಥೆಯನ್ನು ಜಾರಿಗೆ ತರಲು ಐಸಿಸಿ ನಿರ್ಧರಿಸಿದೆ ಎಂದು ವರದಿಯಾಗಿದೆ.
ಒಲಿಂಪಿಕ್ಸ್ಗೆ ತಂಡಗಳ ಆಯ್ಕೆಗಾಗಿ ಏಷ್ಯಾ, ಓಷಿಯಾನಿಯಾ, ಯುರೋಪ್ ಮತ್ತು ಆಫ್ರಿಕಾ ಪ್ರಾದೇಶಿಕತೆಯನ್ನು ಪರಿಗಣಿಸಲಾಗುತ್ತಿದೆ. ಈ ಪ್ರದೇಶದ ತಂಡಗಳಲ್ಲಿ ಹೆಚ್ಚಿನ ಶ್ರೇಯಾಂಕ ಹೊಂದಿರುವ ಟೀಮ್ಗಳು ಒಲಿಂಪಿಕ್ಸ್ಗೆ ಅರ್ಹತೆ ಪಡೆಯಲಿದೆ.
ಸದ್ಯ ಐಸಿಸಿ ಶ್ರೇಯಾಂಕದ ಅನುಸಾರ ಏಷ್ಯಾದಲ್ಲಿ ಭಾರತ ತಂಡ ಅಗ್ರಸ್ಥಾನದಲ್ಲಿದೆ. ಇನ್ನು ಓಷಿಯಾನಿಯಾದಲ್ಲಿ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದ್ದರೆ, ಆಫ್ರಿಕಾದಲ್ಲಿ ಸೌತ್ ಆಫ್ರಿಕಾ ತಂಡ ನಂಬರ್ ಒನ್ ಸ್ಥಾನದಲ್ಲಿದೆ. ಇನ್ನು ಯುರೋಪ್ನಲ್ಲಿ ಇಂಗ್ಲೆಂಡ್ ಮೊದಲ ಸ್ಥಾನದಲ್ಲಿದೆ. ಇನ್ನು ಈ ನಾಲ್ಕು ತಂಡಗಳ ಜೊತೆಗೆ ಆತಿಥೇಯ ಅಮೆರಿಕ ತಂಡಕ್ಕೂ ಅವಕಾಶ ನೀಡಲಾಗುತ್ತದೆ ಎನ್ನಲಾಗಿದೆ.
ಇನ್ನು ಆತಿಥೇಯ ರಾಷ್ಟ್ರ ಅಮೆರಿಕಕ್ಕೆ ಅವಕಾಶ ನೀಡಿದರೆ, ವೆಸ್ಟ್ ಇಂಡೀಸ್ ಅನ್ನು ಸಂಯೋಜಿತ ತಂಡವೆಂದು ಪರಿಗಣಿಸುವ ಸಾಧ್ಯತೆಯಿದೆ. ಪ್ರಸ್ತುತ ಐದು ಸ್ಥಾನಗಳಿಗೆ ಅರ್ಹತೆಯನ್ನು ಅಂತಿಮಗೊಳಿಸಲಾಗಿದೆ. ಆದರೆ ಆರನೇ ತಂಡದ ಪ್ರಕ್ರಿಯೆಯನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ.
ಐಸಿಸಿ ಪ್ರಾದೇಶಿಕ ಅರ್ಹತಾ ಆಧಾರದ ಮೇಲೆ ತಂಡಗಳನ್ನು ಆರಿಸುವುದಾದರೆ ಪಾಕಿಸ್ತಾನಕ್ಕೆ ಅವಕಾಶ ದೊರೆಯವುದಿಲ್ಲ. ಏಕೆಂದರೆ ಪ್ರಸ್ತುತ ಟಿ20 ತಂಡಗಳ ಶ್ರೇಯಾಂಕ ಪಟ್ಟಿಯಲ್ಲಿ ಪಾಕಿಸ್ತಾನ ತಂಡವು ೮ನೇ ಸ್ಥಾನದಲ್ಲಿದೆ. ಇದರಿಂದ 2028ರ ಒಲಿಂಪಿಕ್ಸ್ನಲ್ಲಿ ಕಣಕ್ಕಿಳಿಯುವ ಅವಕಾಶವನ್ನು ಪಾಕಿಸ್ತಾನ ಕಳೆದುಕೊಳ್ಳಲಿದೆ.