ಪುತ್ತೂರು, ಜು. 29 (DaijiworldNews/AA): ಕರ್ನಾಟಕ ಈಜು ಸಂಸ್ಥೆ ಜು. 25 ರಿಂದ 27 ರವರೆಗೆ ಬೆಂಗಳೂರಿನ ಕೆನ್ಸಿಂಗ್ಟನ್ ಸ್ವಿಮ್ಮಿಂಗ್ ಪೂಲ್ನಲ್ಲಿ ನಡೆಸಿದ ಎನ್ಆರ್ಜೆ ಸ್ಟೇಟ್ ಸಬ್ ಜೂನಿಯರ್, ಜೂನಿಯರ್ ಮತ್ತು ಸೀನಿಯರ್ ಡೈವಿಂಗ್ ಚಾಂಪಿಯನ್ ಶಿಪ್ 2025 ರಲ್ಲಿ ನಂದನ್ ನಾಯ್ಕ್ 243.95 ಕ್ಲಾಕಿಂಗ್ ಪಾಯಿಂಟ್ನೊಂದಿಗೆ 3ಮೀ. ಸ್ಪ್ರಿಂಗ್ ಬೋರ್ಡ್ ನಲ್ಲಿ ಚಿನ್ನದ ಪದಕ ಹಾಗೂ ಹೈ ಬೋರ್ಡ್ ನಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ಈ ಮೂಲಕ ಅವರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ರಾಷ್ಟ್ರ ಮಟ್ಟದ ಸ್ಪರ್ಧೆಯು ಬೆಂಗಳೂರಿನಲ್ಲಿ ಅ.4 ರಿಂದ ರವರೆಗೆ ನಡೆಯಲಿದೆ.

ನಂದನ್ ನಾಯ್ಕ್ ಅವರು ನೆಹರೂನಗರದಲ್ಲಿರುವ ಜೀವಾ ಮೆಡಿಕಲ್ಸ್ ಮಾಲಕ ಮುಕ್ವೆ ಮಜಲುಮಾರು ನಿವಾಸಿ ರವಿ ಸಂಪತ್ ನಾಯ್ಕ್ ಮತ್ತು ಕ್ಷಮಿತಾ ದಂಪತಿಯ ಪುತ್ರ. ನಂದನ್ ಅವರು ಸಂತ ಫೀಲೋಮಿನಾ ಕಾಲೇಜಿನಲ್ಲಿ ಪ್ರಥಮ ಬಿ.ಎಸ್ಸಿ ವ್ಯಾಸಂಗ ಮಾಡುತ್ತಿದ್ದಾರೆ. ಅವರು ಅಡ್ಯನಡ್ಕ ವಾರಣಾಶಿ ಸ್ವಿಮ್ಮಿಂಗ್ ಅಕಾಡೆಮಿಯ ಪಾರ್ಥ ವಾರಣಾಶಿ, ವೆಂಕಟೇಶ್, ವಿಕಾಸ್ ಇವರಲ್ಲಿ ಡೈವಿಂಗ್ ತರಬೇತಿ ಪಡೆಯುತ್ತಿದ್ದಾರೆ.
ನಂದನ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೈವಿಂಗ್ನಲ್ಲಿ ಚಿನ್ನ ಗೆದ್ದ ಮೊದಲ ಡೈವರ್. ಎಳೆ ವಯಸ್ಸಿನಿಂದಲೇ ಈಜಿನಲ್ಲಿ ಹಲವಾರು ಸಾಧನೆಗಳನ್ನು ಮಾಡಿರುವ ಈತ ಹಂತ ಹಂತವಾಗಿ ಕಲಿತು ತನ್ನ ಗಮನವನ್ನು ಡೈವಿಂಗ್ನಲ್ಲಿ ಕೇಂದ್ರೀಕರಿಸಿ ಸತತ ಪರಿಶ್ರಮದಿಂದ ಈ ಸಾಧನೆ ಮಾಡಿದ್ದಾನೆ. ಇನ್ನೂ ಹೆಚ್ಚಿನ ಸಾಧನೆಗಳನ್ನು ಮಾಡಲಿ ರಾಷ್ಟ್ರ ಮಟ್ಟದಲ್ಲೂ ಯಶಸ್ಸು ದೊರೆಯಲಿ. ಒಲಂಪಿಕ್ನಲ್ಲಿ ದೇಶ ಪ್ರತಿನಿಧಿಸುವ ಅವನ ಕನಸು ನನಸಾಗಲಿ ಎಂದು ನಂದನ್ ಅವರ ತರಬೇತುದಾರರಾದ ಪಾರ್ಥ ವಾರಣಾಶಿ ತಿಳಿಸಿದ್ದಾರೆ.