ಕಾರ್ಕಳ, ಜು. 29 (DaijiworldNews/AA): ಕಾರ್ಕಳದ ಕ್ರೈಸ್ಟ್ಕಿಂಗ್ ಇಂಗ್ಲಿಷ್ ಮೀಡಿಯಂ ಶಾಲೆಯ ಪ್ರಾಥಮಿಕ ಶಾಲಾ ಬಾಲಕಿಯರ ತಂಡ ಮತ್ತು ಪ್ರೌಢಶಾಲಾ ಬಾಲಕರ ತಂಡ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಅರ್ಹತೆ ಪಡೆದಿವೆ.

ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ ಮತ್ತು ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಆಯೋಜಿಸಲಾದ ಕಾರ್ಕಳ ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯು ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ ನಡೆಯಿತು.
ಕ್ರೈಸ್ಟ್ಕಿಂಗ್ ಪ್ರಾಥಮಿಕ ವಿಭಾಗದ ತಂಡವನ್ನು ಬಾಲಕಿಯರ ತಂಡದಲ್ಲಿ 8ನೇ ತರಗತಿಯ ಖುಷಿ ಶೆಟ್ಟಿ ಮತ್ತು ವಿಸ್ಮಿತಾ, ಹಾಗೆಯೇ 6ನೇ ತರಗತಿಯ ತ್ರಿಷ್ಮಾ ಎಸ್ ಮತ್ತು ಕ್ಯಾಟ್ಲಿನ್ ಏಂಜೆಲ್ ಪಿಂಟೊ ಪ್ರತಿನಿಧಿಸಿದರು. ತಂಡ ಉತ್ತಮ ಪ್ರದರ್ಶನ ನೀಡಿದ ಹಿನ್ನೆಲೆ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಸ್ಥಾನವನ್ನು ಗಳಿಸಿತು.
ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ, ಆಯ್ಕೆಯಾದ ತಂಡದಲ್ಲಿ 10ನೇ ತರಗತಿಯ ಗೌರವ್ ಆರ್, ಪ್ರಥಮ್ ಶೆಟ್ಟಿ, ಶೋಭಿತ್ ಕೆ ಹೆಚ್ ಮತ್ತು ಅಚು ವಿದ್ಯೋಪಾರ್ಜ್ ಗುರುಕುಲಂ, ಹಾಗೂ 9ನೇ ತರಗತಿಯ ಗಾಲ್ವಿನ್ ಜೋಯೆಲ್ ಪಿಂಟೊ ಸೇರಿದ್ದಾರೆ. ತಂಡದ ಉತ್ತಮ ಪ್ರದರ್ಶನದಿಂದಾಗಿ ಸ್ಪರ್ಧೆಯ ಮುಂದಿನ ಸುತ್ತಿನಲ್ಲಿ ಅರ್ಹ ಸ್ಥಾನವನ್ನು ಪಡೆದುಕೊಂಡಿದೆ.
ತಂಡದಲ್ಲಿನ ವಿದ್ಯಾರ್ಥಿಗಳಿಗೆ ಶಾಲೆಯ ದೈಹಿಕ ಶಿಕ್ಷಣ ಬೋಧಕರಾದ ಕೃಷ್ಣ ಪ್ರಸಾದ್, ಪ್ರಕಾಶ್ ನಾಯಕ್ ಮತ್ತು ಲಾವಣ್ಯ ಅವರು ಮಾರ್ಗದರ್ಶನ ನೀಡಿದ್ದಾರೆ. ತಂಡಗಳ ಸಿದ್ಧತೆ ಮತ್ತು ಯಶಸ್ಸಿನಲ್ಲಿ ಇವರ ಪಾತ್ರ ಪ್ರಮುಖವಾಗಿತ್ತು. ಶಾಲಾ ಆಡಳಿತವು ಯುವ ಕ್ರೀಡಾಪಟುಗಳ ಸಾಧನೆಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದೆ. ಜೊತೆಗೆ ತಂಡವು ಜಿಲ್ಲಾ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಲಿದೆ ಎಂಬ ಭರವಸೆ ಹೊಂದಿದೆ.