ಮುಂಬೈ, ಜು. 18(DaijiworldNews/AK): ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ ತಂಡ 1-2 ಅಂತರದಲ್ಲಿ ಹಿನ್ನಡೆ ಅನುಭವಿಸಿದೆ. ಜುಲೈ 23 ರಿಂದ ಮ್ಯಾಂಚೆಸ್ಟರ್ನಲ್ಲಿ ಆರಂಭವಾಗಲಿರುವ ನಾಲ್ಕನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ಸಮಬಲಗೊಳಿಸುವ ಇರಾದೆಯೊಂದಿಗೆ ಟೀಂ ಇಂಡಿಯಾ ಕಣಕ್ಕಿಳಿಯಲಿದೆ.

ಬಿಸಿಸಿಐ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಡ್ರೆಸ್ಸಿಂಗ್ ರೂಮ್ ವೀಡಿಯೊವನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಅವರು ರವೀಂದ್ರ ಜಡೇಜಾ ಅವರನ್ನು ಹೊಗಳಿ ಮಾತನಾಡಿದ್ದಾರೆ. ಈ ಮೂಲಕ ಜಡೇಜಾರನ್ನು ಟೀಕಿಸಿದವರಿಗೆ ತಕ್ಕ ಉತ್ತರವನ್ನು ನೀಡಿದ್ದಾರೆ.
ಲಾರ್ಡ್ಸ್ ಟೆಸ್ಟ್ ಪಂದ್ಯದ ಸೋಲಿನ ನಂತರ, ಬಿಸಿಸಿಐ ಡ್ರೆಸ್ಸಿಂಗ್ ರೂಮ್ನ ವೀಡಿಯೊವನ್ನು ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ, ಇದರಲ್ಲಿ ಜಡೇಜಾರನ್ನು ಹೊಗಳಿರುವ ಗಂಭೀರ್, ‘ಜಡೇಜಾ ಅದ್ಭುತ ಹೋರಾಟ ನಡೆಸಿದರು, ಜಡ್ಡು ನೀಡಿದ ಹೋರಾಟ ನಿಜವಾಗಿಯೂ ಉತ್ತಮ ಇನ್ನಿಂಗ್ಸ್ ಆಗಿತ್ತು’ ಎಂದಿದ್ದಾರೆ.
ವಾಸ್ತವವಾಗಿ ಲಾರ್ಡ್ಸ್ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ರವೀಂದ್ರ ಜಡೇಜಾ 61 ರನ್ಗಳ ಅಜೇಯ ಇನ್ನಿಂಗ್ಸ್ ಆಡಿದ್ದರು. ಬಾಲಂಗೋಚಿಗಳೊಂದಿಗೆ ಜೊತೆಯಾಟ ಕಟ್ಟಿ ಗೆಲುವು ಸಾಧಿಸಲು ಹೊರಾಡಿದರಾದರೂ, ಅದರಲ್ಲಿ ಯಶಸ್ವಿಯಾಗಲಿಲ್ಲ. ಅಂತಿಮವಾಗಿ ಟೀಂ ಇಂಡಿಯಾ 170 ರನ್ಗಳಿಗೆ ಆಲೌಟ್ ಆಗುವ ಮೂಲಕ 22 ರನ್ಗಳಿಂದ ಪಂದ್ಯವನ್ನು ಸೋತಿತ್ತಾದರೂ, ಏಕಾಂಗಿ ಹೋರಾಟ ನೀಡಿದ ಜಡೇಜಾ ಅಜೇಯರಾಗಿ ಉಳಿದರು.
ಗಂಭೀರ್ ಮಾತ್ರವಲ್ಲದೆ ಮೊಹಮ್ಮದ್ ಸಿರಾಜ್ ಕೂಡ ರವೀಂದ್ರ ಜಡೇಜಾ ಅವರನ್ನು ಶ್ಲಾಘಿಸಿದ್ದಾರೆ. ‘ಜಡ್ಡು ಭಯ್ಯಾ ಫೀಲ್ಡಿಂಗ್, ಬೌಲಿಂಗ್ ಮತ್ತು ಬ್ಯಾಟಿಂಗ್ ಎಲ್ಲದರಲ್ಲೂ ತಮ್ಮನ್ನು ತಾವು ಸುಧಾರಿಸಿಕೊಂಡಿದ್ದಾರೆ. ಅವರು ಕಠಿಣ ಸಂದರ್ಭಗಳಲ್ಲಿ ತಂಡಕ್ಕಾಗಿ ರನ್ ಗಳಿಸುತ್ತಾರೆ. ಅವರಂತಹ ಆಟಗಾರ ನಮ್ಮಲ್ಲಿರುವುದು ನಮ್ಮ ಅದೃಷ್ಟ’ ಎಂದಿದ್ದಾರೆ.