ಚೆನ್ನೈ, ಜು. 10 (DaijiworldNews/AA): ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಶುಭಮನ್ ಗಿಲ್ ಬದಲು ಆಕಾಶ್ ದೀಪ್ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಬೇಕಿತ್ತು ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ಆರ್ ಅಶ್ವಿನ್ ತಿಳಿಸಿದ್ದಾರೆ.

ಟೆಸ್ಟ್ ಕ್ರಿಕೆಟ್ ಜಯದ ಬಗ್ಗೆ ಯೂಟ್ಯೂಬ್ ಚಾನೆಲ್ ಒಂದರಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಅವರು, "ಎಜ್ಬಾಸ್ಟನ್ ಮೈದಾನ ಬೌಲರ್ಗಳಿಗೆ ನೆರವು ನೀಡಲಿಲ್ಲ. ಅದು ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿತ್ತು. ಇಂಗ್ಲೆಂಡ್ ಬೌಲರ್ಗಳು ವಿಕೆಟ್ ಪಡೆಯಲು ಹೆಣಗಾಡುತ್ತಿದ್ದರು. ಕಠಿಣ ಪಿಚ್ ಆಗಿದ್ದರೂ ಆಕಾಶ್ ದೀಪ್ 10 ವಿಕೆಟ್ ಪಡೆದಿದ್ದರು. ಹೀಗಾಗಿ ಅಕಾಶ್ದೀಪ್ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಬಹುದಿತ್ತು" ಎಂದು ತಿಳಿಸಿದ್ದಾರೆ.
ಎರಡನೇ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ಬದಲು ಆಕಾಶ್ ದೀಪ್ ಕಣಕ್ಕೆ ಇಳಿದಿದ್ದರು. ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ನಲ್ಲಿ 4 ವಿಕೆಟ್ ಪಡೆದಿದ್ದ ಆಕಾಶ್ ದೀಪ್ ಎರಡನೇ ಇನ್ನಿಂಗ್ಸ್ನಲ್ಲಿ 6 ವಿಕೆಟ್ ಗಳಿಸಿದ್ದರು.
ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಭಾರತ 336 ರನ್ಗಳಿಂದ ಮಣಿಸಿತ್ತು. ಮೊದಲ ಇನ್ನಿಂಗ್ಸ್ನಲ್ಲಿ 269 ರನ್ ಮತ್ತು ಎರಡನೇ ಇನ್ನಿಂಗ್ಸ್ನಲ್ಲಿ 161 ರನ್ ಹೊಡೆದ ಗಿಲ್ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಯಿತು.