ಮುಂಬೈ, ಜೂ. 11 (DaijiworldNews/TA): ಟೀಂ ಇಂಡಿಯಾ ಪ್ರಸ್ತುತ ಇಂಗ್ಲೆಂಡ್ ಪ್ರವಾಸದಲ್ಲಿದ್ದು, ಶುಭ್ಮನ್ ಗಿಲ್ ನೇತೃತ್ವದಲ್ಲಿ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ.

ಈ ಸರಣಿ ಜೂನ್ 20 ರಿಂದ ಪ್ರಾರಂಭವಾಗಲಿದೆ. ರೋಹಿತ್ ಶರ್ಮಾ ಟೆಸ್ಟ್ನಿಂದ ನಿವೃತ್ತರಾದ ನಂತರ, ಶುಭ್ಮನ್ ಗಿಲ್ ಅವರಿಗೆ ಟೆಸ್ಟ್ ನಾಯಕತ್ವ ನೀಡಲಾಗಿದೆ. ಈ ನಡುವೆ ರಾಜ್ಯ ತಂಡವೊಂದು ನಮೀಬಿಯಾ ವಿರುದ್ಧ 5 ಪಂದ್ಯಗಳ ಏಕದಿನ ಸರಣಿ ಆಡಲು ಸಜ್ಜಾಗಿದೆ. ಅಸ್ಸಾಂ ತಂಡ 5 ಪಂದ್ಯಗಳ ಏಕದಿನ ಸರಣಿಗಾಗಿ ನಮೀಬಿಯಾ ಪ್ರವಾಸ ಕೈಗೊಳ್ಳಲಿದ್ದು ನಮೀಬಿಯಾ ಕ್ರಿಕೆಟ್ ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಈ ಮಾಹಿತಿಯನ್ನು ನೀಡಿದೆ.
ಅಸ್ಸಾಂ ಹಾಗೂ ನಮೀಬಿಯಾ ಏಕದಿನ ಸರಣಿಯನ್ನು ನಮೀಬಿಯಾ ಕ್ರಿಕೆಟ್ ಮೈದಾನದಲ್ಲಿ ಆಯೋಜಿಸಲಾಗುತ್ತಿದೆ. ಈ 5 ಪಂದ್ಯಗಳ ಸರಣಿ ಜೂನ್ 21 ರಿಂದ 29 ರವರೆಗೆ ನಡೆಯಲಿದೆ.
ಈ ಸರಣಿಯಲ್ಲಿ ರಿಯಾನ್ ಪರಾಗ್ ಅಸ್ಸಾಂ ತಂಡವನ್ನು ಮುನ್ನಡೆಸಲಿದ್ದಾರೆ. ನಾಯಕತ್ವದಲ್ಲಿ ರಿಯಾನ್ ಪರಾಗ್ ಸಾಕಷ್ಟು ಅನುಭವ ಹೊಂದಿದ್ದಾರೆ. ಸಂಜು ಸ್ಯಾಮ್ಸನ್ ಅನುಪಸ್ಥಿತಿಯಲ್ಲಿ ರಿಯಾನ್ ಪರಾಗ್ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮುನ್ನಡೆಸಿದ್ದಾರೆ.