ಇಸ್ಲಾಮಾಬಾದ್, ಏ.28 (DaijiworldNews/AA): ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಶೊಯೆಬ್ ಅಖ್ತರ್ ಅವರ 3.81 ಮಿಲಿಯನ್ ಸಬ್ಸ್ಕ್ರೈಬರ್ಸ್ ಹೊಂದಿದ್ದ ಯೂಟ್ಯೂಬ್ ಚಾನೆಲ್ ಅನ್ನು ಭಾರತದಲ್ಲಿ ನಿಷೇಧಿಸಲಾಗಿದೆ.

ಶೊಯೆಬ್ ಅಖ್ತರ್ ಅವರು ಈ ಚಾನೆಲ್ನಲ್ಲಿ ಕ್ರಿಕೆಟ್ ಪಂದ್ಯಗಳ ವಿಶ್ಲೇಷಣೆ ಮಾಡುತ್ತಿದ್ದರು. ಆದರೀಗ ಪಾಕಿಸ್ತಾನ ಯೂಟ್ಯೂಬ್ ಚಾನೆಲ್ಗಳ ಮೇಲೆ ಭಾರತ ಡಿಜಿಟಲ್ ಸ್ಟ್ರೈಕ್ ಮಾಡಿದೆ. ಹೀಗಾಗಿ ಹೊಸ ವಿಡಿಯೋಗಳು ಹಾಗೂ ಚಾನೆಲ್ ಹೆಸರು ಇನ್ಮುಂದೆ ಭಾರತದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಅವರು ಈ ಹಿಂದೆ ಅಪ್ಲೋಡ್ ಮಾಡಲಾದ ವಿಡಿಯೋಗಳು ಮಾತ್ರ ಯೂಟ್ಯೂಬ್ನಲ್ಲಿ ಕಾಣ ಸಿಗುತ್ತದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕ ದಾಳಿಯ ನಂತರ, ಪಾಕಿಸ್ತಾನದ ಸಾಮಾಜಿಕ ಮಾಧ್ಯಮಗಳು ತಪ್ಪು ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದರು. ಅದರಲ್ಲೂ ಪ್ರಮುಖ ಯೂಟ್ಯೂಬರ್ಸ್ ಹಾಗೂ ಟಿವಿ ಚಾನೆಲ್ಗಳು ಸುಳ್ಳು ಸುದ್ದಿಗಳನ್ನು ಪ್ರಕಟಿಸಿದ್ದವು. ಹಾಗೆಯೇ ಕೆಲವರು ಮೃತರು ಹಾಗೂ ಭಾರತೀಯ ಸೈನಿಕರನ್ನು ಅಪಹಾಸ್ಯ ಮಾಡಿ ಸುದ್ದಿಗಳನ್ನು ಪ್ರಸಾರ ಮಾಡಿದ್ದರು.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಗೃಹ ಸಚಿವಾಲಯವು ಗೂಗಲ್ಗೆ ಪತ್ರ ಬರೆದು, ಪಾಕಿಸ್ತಾನದ ಪ್ರಮುಖ ಯೂಟ್ಯೂಬ್ ಚಾನೆಲ್ಗಳನ್ನು ಭಾರತದಲ್ಲಿ ಬ್ಯಾನ್ ಮಾಡುವಂತೆ ಮನವಿ ಮಾಡಿತ್ತು. ಅದರಂತೆ ಇದೀಗ 35 ಕ್ಕೂ ಹೆಚ್ಚಿನ ಪ್ರಮುಖ ಯುಟ್ಯೂಬ್ ಚಾನೆಲ್ಗಳನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಇದರೊಂದಿಗೆ ಶೊಯೆಬ್ ಅಖ್ತರ್ ಅವರ ಯೂಟ್ಯೂಬ್ ಚಾನೆಲ್ ಅನ್ನು ಸಹ ಬ್ಯಾನ್ ಮಾಡಲಾಗಿದೆ.