ಮುಂಬೈ, ಏ.26 (DaijiworldNews/AA): ಮೆಗಾ ಹರಾಜಿನ ಸಮಯದಲ್ಲಿ, ನಾವು ಉತ್ತಮ ಆಟಗಾರರನ್ನು ಖರೀದಿಸಲು ವಿಫಲರಾಗಿದ್ದೇವೆ. ಇದು ನಮ್ಮ ತಂಡದ ಸೋಲಿಗೆ ಪ್ರಮುಖ ಕಾರಣವಾಗಿದೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಹೆಡ್ ಕೋಚ್ ಸ್ಟೀಫನ್ ಫ್ಲೆಮಿಂಗ್ ತಿಳಿಸಿದ್ದಾರೆ.

ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ತವರಿನಲ್ಲಿ ಸೋಲಿನ ನಂತರ, ಸಿಎಸ್ಕೆ ತಂಡದ ಈ ಸತತ ಸೋಲುಗಳಿಗೆ ನಿಜವಾದ ಕಾರಣ ಬಹಿರಂಗ ಪಡಿಸಿದ ಅವರು, ಪ್ರಸ್ತುತ ಸೀಸನ್ನಲ್ಲಿ ಚೆನ್ನೈ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ತವರಿನಲ್ಲಿ ಗೆಲುವಿನೊಂದಿಗೆ ಆರಂಭಿಸಿತು, ಆದರೆ ಆ ನಂತರ ಆಡಿದ 8 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಮೆಗಾ ಹರಾಜಿನ ಸಮಯದಲ್ಲಿ, ನಾವು ಉತ್ತಮ ಆಟಗಾರರನ್ನು ಖರೀದಿಸಲು ವಿಫಲರಾಗಿದ್ದೇವೆ. ಇದು ನಮ್ಮ ತಂಡದ ಸೋಲಿಗೆ ಪ್ರಮುಖ ಕಾರಣವಾಗಿದೆ. ನಾವು ಪ್ರಯತ್ನಿಸಿದ ಮತ್ತು ಪರೀಕ್ಷಿಸಲ್ಪಟ್ಟ ಆಟಗಾರರನ್ನು ಮಾತ್ರ ನಂಬಿದ್ದೆವು, ಆದರೆ ನಾವು ತಂಡದಲ್ಲಿ ಹೊಸ ಆಟಗಾರರನ್ನು ಸಹ ಸೇರಿಸಿಕೊಳ್ಳಬೇಕಾಗಿತ್ತು ಎಂದಿದ್ದಾರೆ.
ರಾಹುಲ್ ತ್ರಿಪಾಠಿ, ದೀಪಕ್ ಹೂಡಾ, ವಿಜಯ್ ಶಂಕರ್ ಅವರಂತಹ ಬ್ಯಾಟ್ಸ್ಮನ್ಗಳು ಈ ಸೀಸನ್ನಲ್ಲಿ ಬ್ಯಾಟ್ನಿಂದ ವಿಶೇಷವಾದ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ, ಇದರಿಂದಾಗಿ ತಂಡವು ತೊಂದರೆ ಅನುಭವಿಸಬೇಕಾಯಿತು. ಮುಂದಿನ ಸೀಸನ್ನಲ್ಲಿ ಯುವ ಆಟಗಾರರಾದ ಆಯುಷ್ ಮ್ಹಾತ್ರೆ, ಶೇಖ್ ರಶೀದ್ ಮತ್ತು ಡೆವಾಲ್ಡ್ ಬ್ರೆವಿಸ್ ಉತ್ತಮ ಪ್ರದರ್ಶನ ನೀಡಬಹುದು. ತಂಡವು ಅವರನ್ನು ಭರವಸೆಯಿಂದ ನೋಡುತ್ತಿದೆ. ಇದು ಮಾತ್ರವಲ್ಲದೆ ನಿಯಮಿತ ನಾಯಕ ರುತುರಾಜ್ ಗಾಯಕ್ವಾಡ್ ಗಾಯಗೊಂಡಿರುವುದರಿಂದ ತಂಡದ ಬ್ಯಾಟಿಂಗ್ ಕೂಡ ದುರ್ಬಲಗೊಂಡಿದೆ. ನಾವು ನಮ್ಮ ತಪ್ಪುಗಳಿಂದ ಕಲಿಯುತ್ತೇವೆ ಮತ್ತು ಸುಧಾರಿಸಲು ಪ್ರಯತ್ನಿಸುತ್ತೇವೆ. ನಾವು ಬಹಳಷ್ಟು ತಪ್ಪುಗಳನ್ನು ಮಾಡಿದ್ದೇವೆ, ಅದನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ಇನ್ನು ಈ ಬಾರಿಯ ಐಪಿಎಲ್ನಲ್ಲಿ ಸಿಎಸ್ಕೆ ತಂಡ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ತಂಡವು ಆಡಿರುವ 9 ಪಂದ್ಯಗಳಲ್ಲಿ ಎರಡರಲ್ಲಿ ಮಾತ್ರ ಗೆಲುವು ಸಾಧಿಸಿದ್ದು, ಇನ್ನುಳಿದ 7 ಪಂದ್ಯಗಳಲ್ಲಿ ಸೋಲನ್ನನುಭವಿಸಿದೆ. ಸಿಎಸ್ಕೆ ತಂಡ ಪ್ಲೇಆಫ್ನಿಂದ ಬಹುತೇಕ ಹೊರಬಿದ್ದಿದೆ. ಆದಾಗ್ಯೂ ಸಿಎಸ್ಕೆ ಪ್ಲೇಆಫ್ ತಲುಪಬೇಕಾದರೆ, ಎಲ್ಲಾ ಪಂದ್ಯಗಳನ್ನು ಗೆಲ್ಲುವುದರೊಂದಿಗೆ ಇತರ ತಂಡಗಳ ಫಲಿತಾಂಶಗಳನ್ನು ಅವಲಂಬಿಸಬೇಕಾಗುತ್ತದೆ.