ನವದೆಹಲಿ, ಏ.23 (DaijiworldNews/AA): ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನ ಬೈಸರನ್ ಕಣಿವೆಯಲ್ಲಿ ಮಂಗಳವಾರ ನಡೆದ ಭಯೋತ್ಪಾದಕರ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದಾರೆ. ಈ ದಾಳಿಯನ್ನು ಖಂಡಿಸಿ ಟೀಮ್ ಇಂಡಿಯಾ ಕ್ರಿಕೆಟಿಗರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದು, ಮೃತಪಟ್ಟ ಕುಟುಂಬಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಪಹಲ್ಗಾಮ್ನಲ್ಲಿ ಅಮಾಯಕರ ಮೇಲೆ ನಡೆದ ದಾಳಿಯಿಂದ ಆಘಾತ ಮತ್ತು ತೀವ್ರ ದುಃಖವಾಗಿದೆ. ಸಂತ್ರಸ್ತ ಕುಟುಂಬಗಳು ಊಹಿಸಲಾಗದಷ್ಟು ಕಠಿಣ ಪರೀಕ್ಷೆಯನ್ನು ಎದುರಿಸುತ್ತಿರಬೇಕು - ಈ ಕರಾಳ ಸಮಯದಲ್ಲಿ ಭಾರತ ಮತ್ತು ಜಗತ್ತು ಅವರೊಂದಿಗೆ ಒಗ್ಗಟ್ಟಾಗಿ ನಿಂತಿದೆ, ಜೀವಹಾನಿಗೆ ನಾವು ಶೋಕಿಸುತ್ತಿದ್ದೇವೆ ಮತ್ತು ನ್ಯಾಯಕ್ಕಾಗಿ ಪ್ರಾರ್ಥಿಸುತ್ತಿದ್ದೇವೆ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮೃತರ ಕುಟುಂಬಗಳಿಗಾಗಿ ಪ್ರಾರ್ಥಿಸುತ್ತೇನೆ. ಇದಕ್ಕೆ ಕಾರಣರಾದವರು ಬೆಲೆ ತೆರಬೇಕಾಗುತ್ತದೆ. ಭಾರತ ತಿರುಗೇಟು ನೀಡಲಿದೆ ಎಂದು ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.
ಪಹಲ್ಗಾಮ್ನಲ್ಲಿ ಅಮಾಯಕರ ಮೇಲೆ ನಡೆದ ಘೋರ ದಾಳಿಯಿಂದ ತೀವ್ರ ದುಃಖವಾಗಿದೆ. ಮೃತರ ಕುಟುಂಬಗಳಿಗೆ ಹೃದಯಪೂರ್ವಕ ಸಂತಾಪಗಳು. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲಾ ಕುಟುಂಬಗಳಿಗೆ ಶಾಂತಿ ಮತ್ತು ಧೈರ್ಯ ಸಿಗಲಿ ಎಂದು ಪ್ರಾಥಿಸುತ್ತೇನೆ. ಈ ಕ್ರೂರ ಕೃತ್ಯಕ್ಕೆ ನ್ಯಾಯ ದೊರಕಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲಿನ ದಾಳಿಯಿಂದ ತೀವ್ರ ದುಃಖವಾಗಿದೆ. ಬಲಿಯಾದವರಿಗೆ ಮತ್ತು ಅವರ ಕುಟುಂಬಗಳ ಶಕ್ತಿಗಾಗಿ ಪ್ರಾರ್ಥಿಸುತ್ತೇನೆ. ಎಲ್ಲರೂ ಭರವಸೆಯೊಂದಿಗೆ ಜೊತೆಗೆ ನಿಲ್ಲೋಣ ಎಂದು ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಕೆಎಲ್ ರಾಹುಲ್, ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ಕೇಳಿ ಹೃದಯ ವಿದ್ರಾವಕವಾಯಿತು. ಬಲಿಪಶುಗಳ ಕುಟುಂಬಗಳೊಂದಿಗೆ ಸದಾ ನಿಲ್ಲುವೆ. ಶಾಂತಿ ಮತ್ತು ಶಕ್ತಿಗಾಗಿ ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಪಹಲ್ಗಾಮ್ನಲ್ಲಿ ನಡೆದ ದಾಳಿಯ ಬಗ್ಗೆ ಕೇಳಿ ಹೃದಯ ವಿದ್ರಾವಕವಾಗಿದೆ. ಅಸುನೀಗಿದವರಿಗೆ ಮತ್ತು ಅವರ ಕುಟುಂಬಗಳೊಂದಿಗೆ ನನ್ನ ಪ್ರಾರ್ಥನೆ ಇದೆ. ಈ ರೀತಿಯ ಹಿಂಸಾಚಾರಕ್ಕೆ ನಮ್ಮ ದೇಶದಲ್ಲಿ ಸ್ಥಾನವಿಲ್ಲ ಎಂದು ಶುಭ್ಮನ್ ಗಿಲ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರತಿ ಬಾರಿ ಮುಗ್ಧ ಜೀವ ಕಳೆದುಹೋದಾಗಲೂ ಮಾನವೀಯತೆ ಕಳೆದುಕೊಳ್ಳುತ್ತದೆ. ಇಂದು ಕಾಶ್ಮೀರದಲ್ಲಿ ಏನಾಯಿತು ಎಂದು ನೋಡುವುದು ಮತ್ತು ಕೇಳುವುದು ಹೃದಯವಿದ್ರಾವಕವಾಗಿದೆ. ನಾನು ಎರಡು ದಿನಗಳ ಹಿಂದೆ ಅಲ್ಲಿಗೆ ಹೋಗಿದ್ದೆ. ಈ ನೋವು ತುಂಬಾ ಹತ್ತಿರದಂತೆ ಕಾಡುತ್ತಿದೆ ಎಂದು ಟೀಮ್ ಇಂಡಿಯಾದ ಮಾಜಿ ಆಟಗಾರ ಇರ್ಫಾನ್ ಪಠಾಣ್ ಸೋಷಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಪಹಲ್ಗಾಮ್ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ನಡೆದ ಖಂಡನೀಯ ಭಯೋತ್ಪಾದಕ ದಾಳಿಯ ಬಗ್ಗೆ ಕೇಳಿ ತೀವ್ರ ನೋವುಂಟಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನನ್ನ ಹೃದಯ ಮಿಡಿಯುತ್ತದೆ. ಗಾಯಗೊಂಡವರಿಗಾಗಿ ಪ್ರಾರ್ಥನೆಗಳು ಎಂದು ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.